Saturday, September 24, 2016

ಕ್ಲಿಕ್ ಆಯ್ತು ಕವಿತೆ

ಬಾರದವನ ಬರುವಿಕೆಗಾಗಿ
ಕಾದು ಕಲ್ಲಾಗುವ ಮೊದಲು
ನೋಡೊಮ್ಮೆ ಹಿಂತಿರುಗಿ
ಕಾದಿರುವೆ ನಿನ್ನದೊಂದು ಅಪ್ಪಣೆಗಾಗಿ
ನಿನ್ನ ಬೆನ್ನ ಹಿಂದೆ ಆಡಿಕೊಳ್ಳುವವರ
ನಾಲಿಗೆ ಸೀಳಲು

ಮೌನ ಮುರಿದು
ಮಾತಾಡಬೇಕಿದೆ ನೂರು ಮಾತು
ಆದರೆ ನಿನ್ನ ಮಾತಲ್ಲೂ
ಬರಿ ಅವನದ್ದೇ ನೆನಪು
ಅವನ ನೆನಪುಗಳಲ್ಲಿ ಬಂದಿಯಾಗಿರುವ
ನೀನವನ ಪ್ರೇಮಕೈದಿ
ನಾನಿನ್ನ ಕಾವಲುಗಾರ
ನಮ್ಮಿಬ್ಬರ ನಡುವೆ ಇನ್ನೆಂತಹ ಸಂಭಾಷಣೆ

ಹೇಳಬೇಕಿದೆ ಜಗಕೆ ಸಾರಿ
ಯೋಗ್ಯನಲ್ಲ ಅವನು ನಿನ್ನ ಕಾಯುವಿಕೆಗೆ
ಆದರೆ ನೋಯಿಸಲಾರೆ ಅವನಂತೆ ನಾನು
ಕಾಯುವೆ ನಿನ್ನೊಲುಮೆಗೆ ನಿನ್ನಂತೆ ಕಲ್ಲಾಗಿ

ಅವನ ನೆನಪು ಬತ್ತಿ
ಚಿಗುರೋಡೆಯುವುದು ನನ್ನ ಪ್ರೀತಿ
ಕಾಯುವೆ ಅಲ್ಲಿಯವರೆಗೂ
ನಿನ್ನ ಬೆನ್ನ ಹಿಂದಿನ ನೆರಳಾಗಿ
ನಿನ್ನದೊಂದು ಒಪ್ಪಿಗೆಗಾಗಿ

Friday, July 29, 2016

ಕಾದಿರುವೆ ಬಿಡುಗಡೆಗಾಗಿ

ಕಳಚಿಬಿಡಲೆ ದೇಹ
ಉಸಿರುಗಟ್ಟುತಿದೆ
ತಿರುಗಲಾರೆ ಹೊತ್ತು
ಸಾಕದರ ಋಣ

ಹುಡುಕುತಿರುವೆ ಕನ್ನಡಿಯೊಳಗೂ
ಅದರೊಳಗಿನ ನನ್ನನ್ನೆ
ಕಂಡಿದ್ದು ಮತ್ತದೆ
ಕೀವುಗಟ್ಟಿ ಜಿಣುಗುತ್ತಿರುವ
ಯಾವ ಮದ್ದಿಗು ಮಾಯದ
ಅದಕಂಟಿದ ಹುಣ್ಣುಗಳು
ಜಾತಿ ಬಣ್ಣ ರೂಪ ಮತ್ತಿನ್ನೆಷ್ಟೊ

ಆಹಾ ಏನದರ ತಳುಕು ಬಳುಕು
ಅಂದ ಚೆಂದ ಸಿಂಗಾರ
ಒಳಗಿನ ನನಗಲ್ಲವೆ
ಗೊತ್ತದರ ಹುಳುಕು
ಜಾತಿ ಬಣ್ಣ ರೂಪಾನುಸಾರ
ಕಂಡವರಿಗೆ ತಗ್ಗಿ ಬಗ್ಗಿ
ಹಲ್ಲುಗಿಂಜಿ ಮೇರೆವ
ಅದರ ಸೋಗುಲಾಡಿತನ
ಕೇಳಿದರೆ ಒಣ ಧಿಮಾಕು
ನಿನಗೇನು ಗೊತ್ತು
ಸಮಾಜದ ಕಟ್ಟು ಪಾಡು
ನನ್ನಿಂದ ನೀನು
ನಿನ್ನಿಂದ ನಾನಲ್ಲ
ಅಬ್ಬಾ ಅದೆಷ್ಟು ಅಹಂಕಾರ

ಗೊಂಬೆಯೊಂದು ಹಗ್ಗ ಕಳಚಿ
ಸೂತ್ರಧಾರಿಯ ಕೈ ಕಟ್ಟಿ
ತನ್ನಿಷ್ಟಬಂದಂತೆ ಕುಣಿದು
ಗಹ ಗಹಿಸಿ ನಕ್ಕು
ಸೊಕ್ಕಿ ಉಬ್ಬಿ ಮೆರೆದಂತೆ
ನನ್ನಿರುವಿಕೆಗೆ ಸಾಕ್ಷಿಯಾದ
ಆಕಾರವೇ ಸೆರೆಯಾಗಿಸಿ
ತನ್ನೊಳಗೆನ್ನ ಬಂಧಿಸಿದೆ
ಕಾದಿರುವೆ ಬಿಡುಗಡೆಗಾಗಿ!

Wednesday, August 28, 2013

ಇದೇನಾ ಪ್ರೀತಿ?

ಊಟ ಸೇರದು
ದಾಹ ನೀಗದು
ನಿದ್ದೆ ಬಾರದು

ಇದೇನಾ ಪ್ರೀತಿ?

ಹೊತ್ತು ಸಾಲದು
ದಾರಿ ಸಾಗದು
ಮನಸ್ಸು ನಿಲ್ಲದು

ಇದೇನಾ ಪ್ರೀತಿ?

ನೆನಪು ಮಾಸದು
ಮಾತು ಮುಗಿಯದು
ಮೌನ ಕಾಡುವುದು

ಇದೇನಾ ಪ್ರೀತಿ?

ಬೆಂಕಿ ಸುಡದು
ಗಂಧ ಸೂಸದು
ಕನಸು ಕಮರದು

ಇದೇನಾ ಪ್ರೀತಿ?

Tuesday, June 18, 2013

ಸದಾ ಸುಂದರ ಗಾಂಧಾರಿ

"ಅಮಲುಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ" ಕಾರಣವಿಲ್ಲದೆ ಇಷ್ಟವಾದ ಸಾಲಿದು. ಅದೇನೊ ಈ ಸಾಲು ಒಂತರ ಇಷ್ಟವಾಯ್ತು, ಗಾಂಧಾರಿಯ ಬಗೆಗಿನ ಕುತೂಹಲವು ಇದಕ್ಕೆ ಕಾರಣವಾಗಿರಬಹುದೇನೊ? ಗೊತ್ತಿಲ್ಲ. ಒಂದರ್ಥದಲ್ಲಿ ಮಹಭಾರತದಲ್ಲಿ ಬರುವ ಕುಂತಿ, ದ್ರೌಪದಿ ಮತ್ತು ಗಾಂಧಾರಿ ಎಲ್ಲರೂ ದುರಂತ ನಾಯಕಿಯರೇ. ಯಾರು ಆ ಪಾತ್ರಗಳ ಒಳಹೊಕ್ಕು ಅವುಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಪಾತ್ರಗಳಿಗೆ ಅವುಗಳ ಸೃಷ್ಟಿಕರ್ತನ ಧೋರಣೆಯನ್ನು ಒಪ್ಪದೆ ಬೇರೆ ವಿಧಿಯಿರಲಿಲ್ಲ. ಅವುಗಳ ಅಸಹಾಯಕತೆಯನ್ನು ಜನರು ಬೇರೆಯದೆ ರೀತಿಯಲ್ಲಿ ಅರ್ಥೈಸಿ ಕೊಂಡರು. ಹಾಗೆಯೇ ಗಾಂಧಾರಿ ಅಪ್ರತಿಮ ಸೌಂದರ್ಯವತಿಯಾಗಿದ್ದರು ಅವಳು ಸುದ್ದಿಯಾಗಿದ್ದು ಮಾತ್ರ ಅವಳ ಪಾತಿವ್ರತ್ಯಕ್ಕಾಗಿ ಮಾತ್ರ.

ಗಾಂಧಾರಿ ಸೌಂದರ್ಯವತಿ, ಬುದ್ಧಿವಂತೆ ಮತ್ತು ಸುಸಂಸ್ಕೃತೆ. ಅವಳಿಗೂ ಎಲ್ಲರಂತೆ ವಯೋ ಸಹಜ ಅಕಾಂಕ್ಷೆಗಳಿದ್ದವು. ಸ್ವಚ್ಛಂದವಾದ ನೀರಿನ ಛಾಯೆಯಲ್ಲಿ ತನ್ನ ಸೌಂದರ್ಯವನ್ನು ಸವಿಯುತ್ತ ನೂರಾರು ಕನಸುಗಳನ್ನ ಕಾಣುತ್ತಿದ್ದಳು. ಸಖಿಯರು ಅವಳ ಸೌಂದರ್ಯವನ್ನು ಹೊಗಳುತ್ತ ಅವಳಲ್ಲಿ ನೂರಾಸೆ ಬಿತ್ತಿದ್ದರು. ಅವಳಿಗೂ ಪ್ರಾಯದ ಹುಡುಗಿಯರಂತೆ ಸುರಸುಂದರನನ್ನು ವರಿಸುವ ಆಸೆಯಿತ್ತು. ತನ್ನ ಅಪ್ರತಿಮ ಚೆಲುವನ್ನು ಪ್ರತಿ ಕ್ಷಣವು ಆರಾಧಿಸುವ ಮನ್ಮಥನ ಆಗಮನಕ್ಕೆ ಅವಳ ಮನ ಹಾತೊರೆಯುತ್ತಿತ್ತು. ಆದರೆ ಆದದ್ದೇನು? ಅವಳಿಗೆ ಸಿಕ್ಕಿದ್ದು ಒಬ್ಬ ಕುರುಡ. ಸೌಂದರ್ಯದ ಗಂಧ ಗಾಳಿ ಗೊತ್ತಿರದ ಹುಟ್ಟು ಕುರುಡ. ತನ್ನ ಸೌಂದರ್ಯವನ್ನು ತನ್ನಿಡಿ ಜನ್ಮದಲ್ಲಿ ಮತ್ತೆಂದು ನೋಡಿಕೊಳ್ಳಲಾಗಲಿಲ್ಲ ಅವಳಿಗೆ ಕಟ್ಟಿಕೊಂಡ ಕಣ್ಣ ಪಟ್ಟಿಯಿಂದಾಗಿ.

ಕಣ್ಣಿದ್ದು ಕುರುಡಿಯಂತೆ ಬದುಕುವುದು ಅಂದರೆ ಸುಮ್ನೆನಾ? ಇದೆಲ್ಲಾ ಗಾಂಧಾರಿ ಇಷ್ಟಪಟ್ಟು ಮಾಡಿದ್ಳಾ? ಹೀಗಂತ ನನಗೂ ಅನ್ನಿಸಿದ್ದಿದೆ. ಆದರೆ ಎಸ್. ಎಲ್. ಭೈರಪ್ಪನವರ ’ಪರ್ವ’ ಓದಿದಾಗ ನನಗೆ ಕಂಡಿದ್ದು ಬೇರೆಯದೆ ಗಾಂಧಾರಿ. ಅವಳಿಗೆ  ಕುರುಡನನ್ನು ವರಿಸಲು ಒಂದಿಷ್ಟು ಇಷ್ಟವಿರಲಿಲ್ಲ ಅದೊಂದು ಬಲವಂತದ ಮದುವೆ. ಮದುವೆ ತಪ್ಪಿಸಿಕೊಳ್ಳಲು ಗಾಂಧಾರಿ ಮಗುವಿನಂತೆ - ಅಪ್ಪ, ಆ ಕುರುಡನೊಂದಿಗೆ ಮದುವೆ ಮಾಡಿದರೆ ನಾನೆಂದು ಅವನ ಮುಖವನ್ನ ನೋಡುವುದಿಲ್ಲ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದು. ಸ್ವಾರ್ಥ ಸಾಧನೆಗಾಗಿ ಅವಳಪ್ಪ, ಇನ್ನೂ ಹುಡುಗು ಬುದ್ಧಿ ನಾಲ್ಕಾರು ದಿನಗಳ ನಂತರ ಅವಳೇ ಕಣ್ಣಿಗೆ ಕಟ್ಟಿಕೊಂಡ ಬಟ್ಟೆ ಬಿಚ್ಚುತ್ತಾಳೆಂದು ಮಾಡಿದ ಒಲ್ಲದ ಮದುವೆ. ಅವಳ ಕಣ್ಣಿನ ಪಟ್ಟಿಗೆ ಜನರು ನೀಡಿದ ಬೇರೆಯದೆ ಬಿರುದು. ಒಲ್ಲದ ಗಂಡನಿಗಿಂತ ಒಲಿದು ಬಂದ ಪತಿವ್ರತೆ ಅನ್ನೊ ಬಿರುದನ್ನು ಉಳಿಸಿಕೊಳ್ಳುವ ಖಯಾಲಿಯೋ? ಒಟ್ಟಂತು ಅವಳೊಬ್ಬಳು ಪತಿವ್ರತೆಯಾದಳು. ಅವಳ ಸೌಂದರ್ಯ ಮಾತ್ರ ಮುಳ್ಳಿನ ಗಿಡದಲ್ಲಿನ ಹೂವಿನಂತೆ ಬಾಡಿಹೋಯಿತು, ಸವಿಯುವ ಕಣ್ಣುಗಳಿಗದು ನಿಲುಕಲೆಯಿಲ್ಲ.              

Thursday, May 30, 2013

ಮಳೆಯೇ ಹೀಗೆ

ಗಿಜಿಗಿಜಿ ರಸ್ತೆಗಳು
ತೊಟ್ಟಿಕ್ಕುವ ಹನಿಗಳು
ಬಣ್ಣಬಣ್ಣದ ಕೊಡೆಗಳು
ಈ ಮಳೆಯೇ ಹೀಗೆ

ಸಿಗರೇಟಿನ ಬೆಚ್ಚಗಿನ ಹೊಗೆ
ಬಿಸಿ ಬಿಸಿ ಆಂಬೊಡೆ
ಹೊಗೆಯಾಡುತ್ತಿರುವ ಕಾಫಿ
ಈ ಮಳೆಯೇ ಹೀಗೆ

ಕೈಕೊಟ್ಟ ವಿದ್ಯುತ್
ಮೇಣಬತ್ತಿಯ ಬೆಳಕು
ಹಾಡುತ್ತಿರುವ ರೇಡಿಯೋ
ಈ ಮಳೆಯೇ ಹೀಗೆ

ಬೆಚ್ಚಗಿನ ಅಪ್ಪುಗೆ
ಆರ್ಭಟಿಸುವ ಗುಡುಗು
ಕಾಗದದ ಹಡಗು
ಈ ಮಳೆಯೇ ಹೀಗೆ

ಮಣ್ಣಿನ ಘಮಲು
ಉರುಳಿದ ಮರಗಳು
ಮನೆಹೊಕ್ಕ ನೀರು
ಈ ಮಳೆಯೇ ಹೀಗೆ

ಒದ್ದೆಯಾದ ಮನಸ್ಸು
ಚಿಗುರೊಡೆದ ನೆನಪುಗಳು
ಹಸಿಬಿಸಿ ಕನಸುಗಳು
ಈ ಮಳೆಯೇ ಹೀಗೆ

Saturday, December 29, 2012

ಬಲಿಪಶು


ಲೋಕದ ಕಣ್ಣಿಗೆ
ನಾನೊಂದು ಬಲಿಪಶು
ಪಶುವಂತೆ ನನ್ನ
ಎಳೆದೆಳೆದು ತಿಂದು
ಹಸಿವ ನೀಗಿಸಿಕೊಂಡವರಾರೊ?
ಆದರೆ ಪಶುವೆಂಬ ಬಿರುದು
ಅಂಟಿಕೊಂಡಿದ್ದು ಮಾತ್ರ ನನಗೆ
ನಾನೊಂದು ಬಲಿಪಶು!

ಹೆತ್ತವರೆ ಬೇಡವೆಂದು
ಕಾಡಿಗೆ ಅಟ್ಟಿರಲು
ಅವನ ಕಷ್ಟಗಳಲಿ
ಜೊತೆಗಿದ್ದ ನನಗೆ
ಸಿಕ್ಕಿದ್ದಾದರೂ ಏನು?
ಅವನ ಅನುಮಾನ ಮತ್ತು
ಅವಮಾನಗಳ ಬಿಟ್ಟು
ಲೋಕದ ಕಣ್ಣಿಗೆ ರಾಮ
ದೇವನೆನಿಸಿದರು
ಆ ಕ್ಷಣದಲ್ಲಿ ನನಗೆ
ಅವನೊಬ್ಬ ಸಾಮಾನ್ಯ
ಮನುಷ್ಯನಂತೆ ಕಂಡಿದ್ದ
ಹೆಣ್ಣು ಸಹನಾಮಯಿಯಂತೆ,
ಕರುಣಾಮಯಿಯಂತೆ,
ಕ್ಷಮಯಾಧರಿತ್ರಿಯಂತೆ
ಸಹಿಸಿಕೊಳ್ಳುತ್ತಿರಬೇಕು ಎಲ್ಲವ!

ಜೂಜಿಗೆ ದಾಸರಾಗಿ ಆಡಿದ್ದು
ಅನುಭವಿಸಿದ್ದು ಆ ಐವರು
ಅಣ್ಣತಮ್ಮಂದಿರಾದರು
ನಿಜ ಅರ್ಥದಲ್ಲಿ ಸೋತಿದ್ದು ನಾನು
ಹಂಚಿಕೊಳ್ಳಲೇನು ವಸ್ತುವೇ ನಾನು?
ಗೊತ್ತಿಲ್ಲ ಅವರಿಗೆ
ಹಂಚಿಕೊಂಡಿದ್ದು ಅವರು
ಕೇವಲ ನನ್ನ ದೇಹವ
ಹೃದಯದಲ್ಲಿ ನಾನಾರಿಗು
ಕೊಟ್ಟಿರಲಿಲ್ಲ ಒಂದಿಂಚು ಜಾಗವ
ಹೆಣ್ಣು ಸಹನಾಮಯಿಯಂತೆ,
ಕರುಣಾಮಯಿಯಂತೆ,
ಕ್ಷಮಯಾಧರಿತ್ರಿಯಂತೆ
ಸಹಿಸಿಕೊಳ್ಳುತ್ತಿರಬೇಕು ಎಲ್ಲವ!

ನನ್ನ ಭಾವನೆಗಳ ಬಲಿಪಡೆಯಲು  
ಸಮಾಜ ಕೊಟ್ಟ ಬಿರುದುಗಳು
ಸಹನಾಮಯಿ, ಕರುಣಾಮಯಿ,
ಕ್ಷಮಯಾಧರಿತ್ರಿ ಮತ್ತಿನ್ನೇನೊ?
ಸಹಿಸಲಾರೆ, ಕರುಣಿಸಲಾರೆ,
ಕ್ಷಮಿಸಲಾರೆ ನಾನೂ
ಭಾವನೆಗಳಿವೆ ಎಲ್ಲರಂತೆ ನನಲ್ಲೂ
ಆದರೆ ಕೇಳುವ ಕಿವಿಗಳಿಲ್ಲಷ್ಟೆ!

ನನ್ನ ಭಾವನೆಗಳ ಕೊಂದು
ಚಟ್ಟದಿ ಹೊತ್ತುಕೊಂಡು
ಹೋಗಿದ್ದರು ಅವರು ಅಂದೆ
ದೇಹ ಮಾತ್ರ ಉಳಿದಿತ್ತು!  
ಸತ್ತಿದ್ದೆ ನಾನು ಅಂದೆ
ಇಂದು ಸತ್ತಿದ್ದು
ಕೇವಲ ನನ್ನ ದೇಹ!

Thursday, December 20, 2012

ಅವನಾಟ

ಅವನಾಟವಂತೆ ಕೇಳಲಿಲ್ಲ
ಯಾರು ನನ್ನ ಇಷ್ಟವ
ಹುಟ್ಟಿಸು ಎಂದು ಕೇಳಿರಲಿಲ್ಲ
ಆದರು ಅವ ಹುಟ್ಟಿಸಿದ

ಹುಟ್ಟಿನೊಂದಿಗೆ ಬಿಟ್ಟಿರುವ
ಬೆನ್ನ ಹಿಂದೊಂದು
ಸಾವೆಂಬೋ ರಣಹದ್ದ
ಸುಖವೋ ದುಃಖವೋ
ಓಡುತ್ತಿರಬೇಕು
ನಿಯಮದಂತೆ ಅವನ
ಅಟ್ಟಿಸಿಕೊಂಡು ಬರುತಿದೆ
ಹಸಿದ ಹಕ್ಕಿ
ಸಿಕ್ಕವರ ಕುಕ್ಕಿ ಕುಕ್ಕಿ

ಅಸಹ್ಯ ಹುಟ್ಟಿತೆ ಆತ್ಮಕ್ಕೆ
ದೇಹದ ಮೇಲೆ?
ಕುಂದಿತೆ ಶಕ್ತಿ ದೇಹಕ್ಕೆ
ಆತ್ಮವನ್ನು ಹಿಡಿದಿಡಲು?
ನಿನ್ನೆ ಜೊತೆಗಿದ್ದವರು ಇಂದಿಲ್ಲ
ಹಾರಿತು ಆತ್ಮ ಎಲ್ಲಿಗೋ?
ಮಣ್ಣಾಗಿದೆ ದೇಹ ಮಾತ್ರ ಇಲ್ಲಿಯೆ

ಆಹಾರವಾಗಲೇ ಬೇಕಿದೆ
ಹದ್ದಿಗೆ ಎಂದಾದರು
ಅಂದಾಗುವುದು ಇಂದೆಯಾಗಲಿ
ಏನು ವ್ಯತ್ಯಾಸ?
ಗೊತ್ತಾಗಿದ್ದು ಹತ್ತಿರ ಹೋದಾಗಲೆ
ಹದ್ದಲ್ಲ ಅದೊಂದು ಸುಂದರ ಪಾರಿವಾಳ
ಹೊತ್ತು ತಂದಿದೆ ಅವನದ್ದೇ ಸಂದೇಶ
ಆಟ ಮುಗಿಯಿತು ನೀನಿನ್ನು ಸ್ವತಂತ್ರ!