ನಾನೊಂದು ಬಲಿಪಶು
ಪಶುವಂತೆ ನನ್ನ
ಎಳೆದೆಳೆದು ತಿಂದು
ಹಸಿವ ನೀಗಿಸಿಕೊಂಡವರಾರೊ?
ಆದರೆ ಪಶುವೆಂಬ ಬಿರುದು
ಅಂಟಿಕೊಂಡಿದ್ದು ಮಾತ್ರ ನನಗೆ
ನಾನೊಂದು ಬಲಿಪಶು!
ಹೆತ್ತವರೆ ಬೇಡವೆಂದು
ಕಾಡಿಗೆ ಅಟ್ಟಿರಲು
ಅವನ ಕಷ್ಟಗಳಲಿ
ಜೊತೆಗಿದ್ದ ನನಗೆ
ಸಿಕ್ಕಿದ್ದಾದರೂ ಏನು?
ಅವನ ಅನುಮಾನ ಮತ್ತು
ಅವಮಾನಗಳ ಬಿಟ್ಟು
ಲೋಕದ ಕಣ್ಣಿಗೆ ರಾಮ
ದೇವನೆನಿಸಿದರು
ಆ ಕ್ಷಣದಲ್ಲಿ ನನಗೆ
ಅವನೊಬ್ಬ ಸಾಮಾನ್ಯ
ಮನುಷ್ಯನಂತೆ ಕಂಡಿದ್ದ
ಹೆಣ್ಣು ಸಹನಾಮಯಿಯಂತೆ,
ಕರುಣಾಮಯಿಯಂತೆ,
ಕ್ಷಮಯಾಧರಿತ್ರಿಯಂತೆ
ಸಹಿಸಿಕೊಳ್ಳುತ್ತಿರಬೇಕು ಎಲ್ಲವ!
ಜೂಜಿಗೆ ದಾಸರಾಗಿ ಆಡಿದ್ದು
ಅನುಭವಿಸಿದ್ದು ಆ ಐವರು
ಅಣ್ಣತಮ್ಮಂದಿರಾದರು
ನಿಜ ಅರ್ಥದಲ್ಲಿ ಸೋತಿದ್ದು ನಾನು
ಹಂಚಿಕೊಳ್ಳಲೇನು ವಸ್ತುವೇ ನಾನು?
ಗೊತ್ತಿಲ್ಲ ಅವರಿಗೆ
ಹಂಚಿಕೊಂಡಿದ್ದು ಅವರು
ಕೇವಲ ನನ್ನ ದೇಹವ
ಹೃದಯದಲ್ಲಿ ನಾನಾರಿಗು
ಕೊಟ್ಟಿರಲಿಲ್ಲ ಒಂದಿಂಚು ಜಾಗವ
ಹೆಣ್ಣು ಸಹನಾಮಯಿಯಂತೆ,
ಕರುಣಾಮಯಿಯಂತೆ,
ಕ್ಷಮಯಾಧರಿತ್ರಿಯಂತೆ
ಸಹಿಸಿಕೊಳ್ಳುತ್ತಿರಬೇಕು ಎಲ್ಲವ!
ನನ್ನ ಭಾವನೆಗಳ ಬಲಿಪಡೆಯಲು
ಸಮಾಜ ಕೊಟ್ಟ ಬಿರುದುಗಳು
ಸಹನಾಮಯಿ, ಕರುಣಾಮಯಿ,
ಕ್ಷಮಯಾಧರಿತ್ರಿ ಮತ್ತಿನ್ನೇನೊ?
ಸಹಿಸಲಾರೆ, ಕರುಣಿಸಲಾರೆ,
ಕ್ಷಮಿಸಲಾರೆ ನಾನೂ
ಭಾವನೆಗಳಿವೆ ಎಲ್ಲರಂತೆ ನನಲ್ಲೂ
ಆದರೆ ಕೇಳುವ ಕಿವಿಗಳಿಲ್ಲಷ್ಟೆ!
ನನ್ನ ಭಾವನೆಗಳ ಕೊಂದು
ಚಟ್ಟದಿ ಹೊತ್ತುಕೊಂಡು
ಹೋಗಿದ್ದರು ಅವರು ಅಂದೆ
ದೇಹ ಮಾತ್ರ ಉಳಿದಿತ್ತು!
ಸತ್ತಿದ್ದೆ ನಾನು ಅಂದೆ
ಇಂದು ಸತ್ತಿದ್ದು
ಕೇವಲ ನನ್ನ ದೇಹ!