ನೀನ್ಯಾರೆ? ಹಾಲಿನಂತಹ ನನ್ನ ಮನಸ್ಸಲ್ಲಿ ಜೇನಿನಂತೆ ಒಂದಾಗಲು ಬಂದವಳು ಹೀಗೇಕೆ ಹುಳಿ ಹಿಂಡಿ ಹೋದೆ? ನನ್ನ ಮೈ ಮನವೆಲ್ಲ ತುಂಬಿ ನಿಂತು ಈಗ ಹೀಗೆ ಕಾರಣವಿಲ್ಲದೆ ಹೋದದ್ದಾದರು ಎಲ್ಲಿಗೆ? ಇದ್ದಷ್ಟು ದಿನ ನೀನೇ ನಾನು ನಾನೇ ನೀನು ಎಂದು ನನ್ನ ಮನದಲ್ಲಿ ನೂರಾರು ಹುಚ್ಚು ಭಾವನೆಗಳಿಗೆ ಜನ್ಮ ಕೊಟ್ಟು ಈಗ ನನ್ನ ಭಾವನೆಗಳನೆಲ್ಲಾ ಹೀಗೆ ಅನಾಥವಾಗಿ ಬಿಟ್ಟು ಹೋದದ್ದಾದರು ಯಾಕೆ? ನಾವು ಒಟ್ಟಾಗಿ ಕಳೆದ ಆ ಒಂದೊಂದು ಮಧುರ ಕ್ಷಣಗಳನ್ನು ಮರೆಯುವುದಾದರೂ ಹೇಗೆ?
ಎಲ್ಲೋ ಸ್ವತಂತ್ರವಾಗಿ ಹಕ್ಕಿಯಂತೆ ಹಾರಿಕೊಂಡಿದ್ದ ನನ್ನ ಮನಸ್ಸನ್ನ ಈ ಪ್ರೀತಿ ಪ್ರೇಮದ ಪಂಜರದೊಳಗೆ ತಳ್ಳಿದ್ದಾದರು ಯಾಕೆ? ಯಾರ ಹಂಗು ಇಲ್ಲದ ನನ್ನನ್ನು ಈ ಪ್ರೀತಿಯ ಹಂಗಲ್ಲಿ ಕೊಳೆಯಲು ಬಿಟ್ಟು ಹೋಗಲು ನಿನಗೆ ಮನಸ್ಸಾದರು ಹೇಗೆ ಬಂತು? ನೀನಿಲ್ಲದ ನಾನು ಉಸಿರಿಲ್ಲದ ಶವದಂತೆ ಎಂದವಳು ಹೀಗೆ ಏಕಾಯೇಕಿ ನಮ್ಮ ಪ್ರೀತಿಯನ್ನೇ ಕೊಂದು ಬಿಡುವಷ್ಟು ಕ್ರೂರಿಯಾಗಿಬಿಟ್ಟೆಯಾ? ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಹೀಗೆ ಬಾಳಿನುದ್ದಕ್ಕೂ ನನ್ನ ಸುಖ ಸಂತೋಷಗಳಲ್ಲಿ ಭಾಗಿಯಾಗಿರುತ್ತೇನೆ ಅಂದವಳು ನೀನೇನಾ? ನೀನಗೆ ನೆನಪುಗಳೇ ಇಲ್ಲವಾ? ಇದ್ದರು ಅವು ನಿನ್ನನು ಕಾಡದೇ ಸುಮ್ಮನಿದ್ದಾವಾ? ಯಾಕೆ ಹೀಗೆ? ಈ ನೆನಪುಗಳು ನನ್ನನ್ನೇ ಯಾಕೆ ಹೀಗೆ ಕಾಡುತ್ತಿವೆ?
ಹೇಳಿ ಹೋಗು ಕಾರಣ ಇಲ್ಲದಿದ್ದರೆ ನಾನು ನಮ್ಮ ಪ್ರೀತಿಯ ಚಿತೆಯಲ್ಲಿ ಅದರಂತೆ ಸುಟ್ಟು ಬುದಿಯಾಗಿ ಬಿಡುವೆ, ಹುಚ್ಚನಂತೆ ಸಿಕ್ಕ ಸಿಕ್ಕ ಮರದ ರೆಂಬೆ ಕೊಂಬೆಗಳ ಮೇಲೆಲ್ಲಾ ನಿನ್ನ ಹೆಸರ ಕೆತ್ತಿ ಬಿಡುವೆ, ದೇವದಾಸನಂತೆ ಬೀರು ಬ್ರ್ಯಾಂಡಿಗಳ ದಾಸನಾಗಿ ಬಿಡುವೆ. ನೀನಿಲ್ಲದೆ ನನಗೆ ನೆನ್ನೆ ನಾಳೆಗಳಿಲ್ಲ, ಬಂಧು ಬಾಂಧವರಿಲ್ಲ, ನೀನಿಲ್ಲದ ನಾ ಉಸಿರಿಲ್ಲದ ಶವವೇ ಸರಿ.
ಸ್ಫೂರ್ತಿ: ಬಿ ಆರ್ ಲಕ್ಷ್ಮಣರಾವ್ ಅವರ 'ಹೇಳಿ ಹೋಗು ಕಾರಣ' ಗೀತೆ
ಹೇಳಿ ಹೋಗು ಕಾರಣ ಹೋಗುವ ಮೊದಲೂ
ನನ್ನ ಬಾಳಿನಿಂದ ದೂರಾಗುವ ಮೊದಲು
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ ?
ಇಂದ್ಯಾವ ಬಂಧ ತೊಡರಿದೆ
ನಿನ್ನ ಕಾಲಿಗೆ ?
ಸುಡುಬೆಂಕಿ ಬೆಳಕು ಉಳಿಯಿತೆ
ನನ್ನ ಪಾಲಿಗೆ ?
ಸವಿಭಾವಗಳಿಗೆ ನೀ ನಾದ ನೀಡಿ
ಜೊತೆಗೂಡಿ ಹಾಡಿದೆ
ಇಂದ್ಯಾವ ಅಳಲು ? ಸೆರೆಯುಬ್ಬಿ ಕೊರಳು
ನೀ ಮೌನ ತಾಳಿದೆ
ನೀ ನೆಟ್ಟು ಬೆಳೆಸಿದ ಈ ಮರ
ಫಲ ತೊಟ್ಟ ವೇಳೆಗೆ
ಹೀಗೇಕೆ ಮುರಿದು ಊರುಳಿದೆ
ಯಾವ ದಾಳಿಗೆ ?
1 comment:
Tumba tumba chennagide...
Post a Comment