Sunday, January 3, 2010

ಕೇಳಲೊಲ್ಲವು ಕಂಗಳು

ಹೇಗೆ ಹೇಳಲಿ ಗೊತ್ತಾಗದಾಗಿದೆ
ಕಾಡಿ ಬೇಡಿ ಕೈ ಮುಗಿದರು
ಕೇಳಲೊಲ್ಲವು ಕಂಗಳು

ಬಂದ ಕಷ್ಟಗಳನ್ನೆಲ್ಲಾ ನುಂಗಿ
ಉಮ್ಮಳಿಸಿ ಬರುವ ದುಃಖವ ಹತ್ತಿಕ್ಕಿ
ಎದೆಯ ಕಟ್ಟೆ ಒಡೆಯದಂತೆ
ಕಲ್ಲ ಗೋಡೆ ಕಟ್ಟಿ
ಮುಖದ ಮೇಲೊಂದು
ಸುಳ್ಳು ನಗೆಯ ಚೆಲ್ಲಿದರು
ಕೇಳಲೊಲ್ಲವು ಕಂಗಳು
ಕಣ್ಣೀರ ಹಾಕುತಿವೆ

ಹೀಗೇಕೆ ಕಾಡುತಿವೆ?
ಯಾರಿಗೇನು ಅನ್ಯಾಯ ಮಾಡಿರುವೆ?
ಎಲ್ಲಿಗೆ ಹೋಗಲಿ? ಯಾರಿಗೆ ಹೇಳಲಿ?
ಎಳ್ಳ ಕಾಳಷ್ಟು ಕರುಣೆಯಿಲ್ಲ
ಜೀವ ಹಿಂಡಿ ಕೊಲ್ಲುತಿವೆ

ಹಳೆಯದನ್ನೆಲ್ಲಾ ಮರೆತು
ಗಂಟು ಮೂಟೆ ಕಟ್ಟಿ
ಹೊಸ ಕನಸ ಕಟ್ಟಲು
ಆ ಊರ ಬಿಟ್ಟು ಈ ಊರಿಗೆ ಬಂದು
ನೆಮ್ಮದಿಯಿಂದ ಕಣ್ಣು ಮುಚ್ಚಿದರು
ಮೊಂಡು ಬಿದ್ದಿವೆ ಕಂಗಳು
ಮತ್ತದೇ ಹಳೆಯ ಕನಸು ಕಾಣುತಿವೆ

ಪ್ರೀತಿ ಕುರುಡಂತೆ ಕಣ್ಣಿಲ್ಲವಂತೆ
ವಿಪರ್ಯಾಸ ನೋಡಿ
ಕಣ್ಣಲ್ಲೇ ಪ್ರೀತಿ ಹುಟ್ಟಿದೆ
ಬದುಕು ಬಲು ಕ್ರೂರ
ಕಂಗಳ ಮುಂದೆಯೆ ಪ್ರೀತಿ
ಸತ್ತು ಬಿದ್ದರು
ನಂಬಲೊಲ್ಲವು ಕಂಗಳು
ಮತ್ತದೇ ಪ್ರೀತಿಯ ಹುಡುಕುತಿವೆ

ಹೇಗೆ ಹೇಳಲಿ ಗೊತ್ತಾಗದಾಗಿದೆ
ಕಾಡಿ ಬೇಡಿ ಕೈ ಮುಗಿದರು
ಕೇಳಲೊಲ್ಲವು ಕಂಗಳು

1 comment:

Ravikumar said...

chennagide...kangalu...