Sunday, February 13, 2011

ದ್ವೀಪವ ಬಯಸಿ


ಭೀಕರ ರಣರಂಗದಲ್ಲಿ ಹೆಣಗಳ ನಡುವೆ ಯೋಧನೊಬ್ಬ ಹಿಡಿದ ಪುಸ್ತಕದ ಮುಖಪುಟದಲ್ಲಿದ್ದ ಬುದ್ಧನ ಚಿತ್ರ ಇನ್ನೂ ಕಾಡುತ್ತಿದೆ. ಬುದ್ಧನ ಮಂದಸ್ಮಿತ ನಗು ಕಣ್ಣಿಗೆ ಕಟ್ಟಿದಂತಿದೆ. "ದ್ವೀಪವ ಬಯಸಿ" ಓದಿ ಮುಗಿಸಿದ್ದರು ಇನ್ನೂ ಅದರ ಗುಂಗಿನಿಂದ ಹೊರಬರಲಾಗುತ್ತಿಲ್ಲ, ಒಂತರಾ hangover.

ಇಲ್ಲಿ ಎಲ್ಲರದ್ದು ಹುಡುಕಾಟದ ಬದುಕು. ಎಲ್ಲರೂ ಹುಡುಕುತ್ತಿದ್ದಾರೆ, ಆದರೆ ಏನನ್ನ? ಎಲ್ಲರೂ ಕಾಲಿಗೆ ಗಾಲಿಕಟ್ಟಿಕೊಂಡವರಂತೆ ಓಡುತ್ತಿದ್ದಾರೆ, ಆದರೆ ಏಲ್ಲಿಗೆ? ಯಾರಿಂದ ತಪ್ಪಿಸಿಕೊಳ್ಳಲು? ಉತ್ತರವ ಹುಡುಕಲು ಒಳಹೊಕ್ಕಂತೆ ಒಂತರ ಹೇಸಿಗೆಯ ಭಾವ. ಬದುಕು ಅತ್ತಿ ಹಣ್ಣಿನಂತೆ ಮೇಲ್ನೋಟಕ್ಕಷ್ಟೇ ಚಂದ ಒಳಗೆ ಬರಿ ಹುಳುಕು, ಸಿಪ್ಪೆ ಬಿಡಿಸಲು ಬುಗು ಬುಗು ಹುಳಗಳು.

"ದ್ವೀಪವ ಬಯಸಿ" ಕಾರ್ಪೋರೇಟ್ ಜಗತ್ತಿನ ಸುತ್ತ ಹೆಣೆದಿರುವ ಕಥೆಯಾಗಿರುವುದರಿಂದ ಮನಸ್ಸಿಗೆ ಹತ್ತಿರವಾಗುತ್ತದೆ. ಕಥೆ ಗೊಲ್ಲರಹಳ್ಳಿಯಿಂದ ಶುರುವಾಗಿ ಲಾಸ್ಏಂಜಲಿಸ್ ಕಡೆಗೆ ಸಾಗುತ್ತ ಹೋಗುತ್ತದೆ. ಎಲ್ಲ ಪಾತ್ರಗಳು ಆಪ್ತವೆನ್ನಿಸುತ್ತವೆ. ಶ್ರೀಕಾಂತ್, ವಾಣಿ, ಫ್ರಾಂಕೋ, ಸಮಿಂದ್, ಹಷಿನಿ, ಅಶೋಕ್, ಸುಜಾತ ಹೀಗೆ ಎಲ್ಲರೂ ನಮ್ಮ ನಡುವೆ ಬೆರೆತು ಹೋಗುತ್ತಾರೆ. ನೋಡು ನೋಡುತ್ತಿರುವಂತೆಯೇ ನಮ್ಮ ಜೀವನದ ಸನ್ನಿವೇಶಗಳು ಕಥೆಯ ಸನ್ನಿವೇಶಗಳ ನಡುವೆ ಕಳೆದುಹೋಗುತ್ತವೆ. ನಮಗೆ ಅರಿವಿಲ್ಲದಂತೆಯೇ ನಾವು ಅದರೊಳಗಿನ ಒಂದು ಪಾತ್ರವಾದಂತೆ ಕೃಷ್ಣನ ಅಗಲಿಕೆಗೆ ಮಮ್ಮಲ ಮರಗುತ್ತೇವೆ, ಇನ್ಫೋವಾಯೆಜ್ ಕಂಪನಿಯಲ್ಲಿ layoff ಆಗುತ್ತಿರಲು ತಮ್ಮ ಸರದಿಗೆ ಕಾಯುತ್ತ conference room ಅಲ್ಲಿ ಕುಳಿತವರ ಮಧ್ಯ ನಾವು ಒಬ್ಬರಾಗಿ ಬಿಡುತ್ತೇವೆ. ಪ್ರತಿಯೊಬ್ಬರಿಗೂ ಅವರದ್ದೆ ಇತಿಹಾಸ, ಪ್ರತಿಯೊಬ್ಬರಿಗೂ ಅತ್ತು ಬಿಡಲು ಅವರದ್ದೇ ಆದ ಕಾರಣಗಳಿವೆ, ಆದರೆ ಯಾರು ಅಳುತ್ತಿಲ್ಲ. ಎಲ್ಲರೂ ಓಡುತ್ತಿದ್ದಾರೆ. ತಮ್ಮಿಂದ, ತಮ್ಮ ಅಂತರಾತ್ಮದಿಂದ ತಪ್ಪಿಸಿಕೊಂಡು, ಅದಕ್ಕೊಂದು ಸುಳ್ಳು ಸಬೂಬು ಕೊಟ್ಟು.

ಜೀವನದಲ್ಲಿ ಪ್ರತಿ ಬಾರಿಯು ಗೆಲ್ಲಲೆಬೇಕಿಲ್ಲ. ಗೆಲುವು ಅನಿವಾರ್ಯವಲ್ಲ. ಗೆದ್ದವನಿಗೆ ಒಂದೆ ದಾರಿಯಾದರೆ ಸೋತವನಿಗೆ ನೂರೆಂಟು ದಾರಿಗಳು ತೆರೆದು ಕೊಳ್ಳುತ್ತವೆ. ಬದಲಾದ ಕಾರ್ಪೋರೇಟ್ ಜಗತ್ತಿನಲ್ಲಿ ಎಲ್ಲರಿಗೂ ತಮ್ಮ ಪ್ರಭುತ್ವ ಸಾದಿಸುವ ಹುಚ್ಚು. ಯಾರಿಗೂ ಯಾವುದನ್ನೂ scratch 'ನಿಂದ ಶುರು ಮಾಡಲು ಪುರುಸೊತ್ತು ಇದ್ದಂತಿಲ್ಲ. ದೊಡ್ಡ ದೊಡ್ಡ ಕಂಪನಿಗಳು ಸಮುದ್ರದ ತಿಮಿಂಗಲಿನಂತೆ ತಮ್ಮ ಹಸಿವನ್ನು ನೀಗಿಸಲು ಸಣ್ಣ ಪುಟ್ಟ ಕಂಪೆನಿಗಳನ್ನು ನುಂಗಿ ಜೀರ್ನವಾದಷ್ಟನ್ನು ದಕ್ಕಿಸಿಕೊಂಡು ಅಳಿದುಳಿದ ತ್ಯಾಜ್ಯವನ್ನ ಹೊರಕಕ್ಕುತ್ತವೆ. ಜನರು ಕೆಲಸ ಕಳೆದು ಕೊಂಡು ಬೀದಿಗೆ ಬೀಳುತ್ತಾರೆ. ಇದೊಂದು ಚದುರಂಗದಾಟವಿದ್ದಂತೆ. ನಾವು ವ್ಯವಸ್ಥೆಯ ಕೈಯಲ್ಲಿರುವ ಚದುರಂಗದ ದಾಳಗಳಿದ್ದಂತೆ. ಕೊನೆಗೆ ಆಟವನ್ನು ಗೆದ್ದರು, ಗೆಲುವನ್ನು ಸಂಭ್ರಮಿಸುವಂತಿಲ್ಲ. ಅಸಲಿಗೆ ಅದು ನಮ್ಮ ಗೆಲುವೇ? ಅಲ್ಲವೇ ಅಲ್ಲ. ನಾವು ವ್ಯವಸ್ಥೆಯ ಕೈಗೊಂಬೆಗಳಷ್ಟೇ. ನಾವು ಓಡುತ್ತಿರಬೇಕು ಮನಸ್ಸಿಗೆ ಮತ್ತೊಂದು ಸಬೂಬು ಹೇಳಿ.

ಇಲ್ಲಿ ಎಲ್ಲರೂ ಅಲೆಮಾರಿಗಳು. ಅವನೊಬ್ಬ ಗಂಡಾಳು ಮತ್ತವಳು ಹೆಣ್ಣಾಳು. ಎಲ್ಲರೂ ಗುಳೆಯೆದ್ದು ಹೋಗುತ್ತಾರೆ. ಇದೆಂತಹ ಹಸಿವು? Capitalism ಪ್ರತಿಪಾದಿಸುವುದು ಇದನ್ನೇ "Greed is good, Greed is right, Greed works". ಎಲ್ಲರದ್ದು calculated life. ಇಲ್ಲಿ ಎಲ್ಲರೂ ಓಡುತ್ತಿದ್ದಾರೆ ಕನಸುಗಳ ಬೆನ್ನಟ್ಟಿ .

ಕಥೆಯೊಳಗೆ ತೆರೆದುಕೊಳ್ಳುವ ಇಟಲಿಯ ಜಾನಪದ ಕಥೆ, ಶ್ರೀಲಂಕಾದ ಅಂತರಿಕ ಯುದ್ದ, ಫ್ರಾಂಕೋ ಮತ್ತು ಸಮಿಂದರ ಹವ್ಯಾಸವಾದ ಫೋಟೋಗ್ರಫಿ, ಮಹಿಂದನ ಡೈರಿ, ಯೊಸಿಮಿಟಿಯ ಸೌಂದರ್ಯ ಕಥಾ ಹಂದರವನ್ನು ಇನ್ನಷ್ಟು ವಿಸ್ತಾರಗೊಳಿಸುತ್ತದೆ.

ಒಟ್ಟಾರೆಯಾಗಿ ಒಂದು ಸುಂದರ ಕಾದಂಬರಿ. ಮನಸ್ಸಿಗೆ ಹತ್ತಿರವಾಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ಓಡುತ್ತಿದ್ದಾರೆ, ಹಸಿದ ನಾಯಿ ಬೆನ್ನಟ್ಟಿರುವಂತೆ, ಆದರೆ ಎಲ್ಲಿಯವರೆಗೆ? ಎಲ್ಲರೂ ಹುಡುಕುತ್ತಿದ್ದಾರೆ, ಆದರೆ ಬುದ್ಧ ತಮ್ಮೊಳಗೆ ಇರುವುದನ್ನು ಮರೆತು. ಎಲ್ಲ ಮುಗಿದ ಮೇಲೆ ಮನಸ್ಸಲ್ಲಿ ಉಳಿಯುವುದು ಒಂದೇ "Where wealth accumulates, men decay".

No comments: