ಅದೇನಾಯ್ತೋ ಗೊತ್ತಿಲ್ಲ ನಾನು ರಸ್ತೆಯ ಮಧ್ಯದಲ್ಲಿ ಬಿದ್ದು ಬಿಟ್ಟಿದ್ದೆ. ನನ್ನ ಕೈಯಲ್ಲಿದ್ದ ಬ್ಯಾಗ್ ಖಾಲಿಯಾಗಿತ್ತು. ರಸ್ತೆಯ ತುಂಬೆಲ್ಲ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದವು. ರಸ್ತೆಯ ತುಂಬೆಲ್ಲ ಹರಡಿದ ವಸ್ತುಗಳಲ್ಲಿ ಹೊಳೆಯುವ ನಕ್ಷತ್ರದಂತಹ ಬಿಲ್ಲೆಗಳಿದ್ದವು, ಅದೆಂತದೋ ಬಂಗಾರದ ಬಣ್ಣದ ಪೆಟ್ಟಿಗೆ, ಬೆಳ್ಳಿಯದೊ ಬಂಗಾರದ್ದೋ ನಾಣ್ಯಗಳಿದ್ದವು (ಸ್ಪಷ್ಟವಾಗಿ ನೆನಪಿಲ್ಲ). ಆಗ ತಾನೇ ಮುದ್ರಣಗೊಂಡಂತಹ ಗರಿಗರಿಯಾದ ನೋಟುಗಳಿದ್ದವು. ಬೆಲೆ ಬಾಳಬಹುದಾದಂತಹ ಒಡವೆಗಳಿದ್ದವು. ಅಸಲಿಗೆ ಅವೆಲ್ಲಾ ನನ್ನವಾ? ಗೊತ್ತಿಲ್ಲಾ.
ನನ್ನ ಸುತ್ತಲಿದ್ದ ಜನ ಅದ್ಯಾವುದೋ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಂಡು ನನ್ನತ್ತ ನೋಡಿ ಗಹಗಹಿಸಿ ನಗುತ್ತಲಿದ್ದರು. ಅದರಲ್ಲೊಬ್ಬ ಸಿಗರೇಟ್ ಸೇದಿ ದಪ್ಪ ಹೋಗೆ ಬಿಡುತ್ತಲಿದ್ದ. ನಾನು ಮಾತ್ರ ರಸ್ತೆಯಲ್ಲಿ ಬಿದ್ದಿದ್ದ ವಸ್ತುಗಳನ್ನು ನನ್ನ ಚೀಲದಲ್ಲಿ ತುಂಬುತಲಿದ್ದೆ. ಸ್ವಲ್ಪ ದೂರದಲ್ಲಿ ಒಂದಷ್ಟು ಜನ ಬಿಕ್ಕಿ ಬಿಕ್ಕಿ ಅಳುತ್ತಲಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟುತಲಿತ್ತು. ಅದರಲ್ಲೊಬ್ಬ ಮಹಿಳೆ ನನ್ನತ್ತ ಕೈ ಮಾಡಿ ಕರೆದಂತಿತ್ತು. ನಾನು ಮಾತ್ರ ಅದ್ಯಾವುದರ ಪರಿವಿಲ್ಲದಂತೆ ರಸ್ತೆಯಲ್ಲಿ ಬಿದ್ದಿದ್ದ ಸಾಮಾನುಗಳನ್ನ ಚೀಲದಲ್ಲಿ ತುಂಬುತ್ತಲೇ ಇದ್ದೆ. ಇನ್ನೊಂದೆಡೆ ಒಂದು ಗುಂಪು ಒಬ್ಬ ಅಮಾಯಕನನ್ನ ಬೆನ್ನಟ್ಟಿ ಹೊರಟಿತ್ತು. ಅವರ ಕೈಯಲ್ಲಿ ಮೀರಿ ಮೀರಿ ಮಿಂಚುತ್ತಿದ್ದ ಮಚ್ಚುಗಳಿದ್ದವು. ನೋಡು ನೋಡುತ್ತಲೇ ಅವನು ಅವರ ಕೈಗೆ ಸಿಕ್ಕಿಬಿಟ್ಟ. ಅವರು ಅವನ ಕೈಯನ್ನ ತುಂಡರಿಸಿ ಬಿಟ್ಟರು. ಅವನ ಬಿಸಿ ರಕ್ತ ನಾನು ಆಯುತಲಿದ್ದ ನೋಟುಗಳ ಮೇಲು ಸಿಡಿದಿತ್ತು ಆದರು ಅದನ್ನ ನನ್ನ ಬಟ್ಟೆಗೆ ಒರಿಸಿಕೊಂಡು ನನ್ನ ಚೀಲದಲ್ಲಿ ಹಾಕಿಕೊಳ್ಳೊದನ್ನ ಮಾತ್ರ ನಾನು ಮರೆತಂತಿರಲಿಲ್ಲ.
ಅಲ್ಲಿ ಒಬ್ಬರು ಸಹ ನನ್ನವರು ಇದ್ದಂತಿರಲಿಲ್ಲ. ಎಲ್ಲರೂ ನನ್ನನ್ನ ಜಾತ್ರೆಯ ತೇರಿನಂತೆ ನೋಡುತಲಿದ್ದರು. ಅಲ್ಲಿ ಯಾರಿಗೂ ನನ್ನ ಪರಿಚಯವಿದ್ದಂತೆ ಕಾಣಲಿಲ್ಲ. ಯಾರೊಬ್ಬರು ನನ್ನ ಸಹಾಯಕ್ಕೆ ಬರಲಿಲ್ಲ. ಅಸಲಿಗೆ ಅವರೆಲ್ಲ ನನ್ನನ್ನ alien ತರಹ ನೋಡುತ್ತಲಿದ್ದರು. ಆದರು ಅದ್ಯಾಕೋ ನಾನು ಮೊಂಡು ಬಿದ್ದವನಂತೆ ಇನ್ನೂ ಚೀಲ ತುಂಬುತಲೇ ಇದ್ದೆ.
ರಸ್ತೆಯಲ್ಲಿ ನಾನು ಹುಚ್ಚನಂತೆ ಹುಡುಕುತ್ತಲಿದ್ದರು ಅವರೆಲ್ಲ ನನ್ನ ಪರಿವಿಲ್ಲದಂತೆ ರಸ್ತೆಯಲ್ಲಿ ಓಡಾಡುತ್ತಲಿದ್ದರು. ಅದರಲೊಬ್ಬ ನನ್ನ ಕೈಯನ್ನ ತುಳಿದು ಬಿಟ್ಟಿದ್ದ. ನೋವಿನಿಂದ ಅವನತ್ತ ನೋಡಲು ಅವನು ಸಹ ಎಲ್ಲರಂತೆ ನನ್ನನ್ನು ನೋಡಿ ನಕ್ಕಿದ್ದ. ಆ ನಗು ಮತ್ತಷ್ಟು ನೋವು ಕೊಟ್ಟಿತ್ತು. ನೋಡು ನೋಡುತ್ತಿದ್ದಂತೆ ಕತ್ತಲೆ ಆವರಿಸಿತ್ತು. ರಸ್ತೆಯನ್ನ ಗೂಡಿಸಲು ಒಂದಿಬ್ಬರು ಮಹಿಳೆಯರು ಉದ್ದುದ್ದ ಪೊರಕೆ ಹಿಡಿದು ನಿಂತಿದ್ದರು. ನಾನು ಅವರನ್ನ ಎಷ್ಟೇ ಕೇಳಿಕೊಂಡರು ಅವರಿಗೆ ಕರುಣೆ ಇದ್ದಂತಿರಲಿಲ್ಲ ಅಲ್ಲಿದ್ದ ವಸ್ತುಗಳೆನ್ನೆಲ್ಲ ಗೂಡಿಸಿ ತಮ್ಮ ಕಸದ ಚೀಲ ತುಂಬುತಲಿದ್ದರು. ನನ್ನ ಕೂಗನ್ನ ಅಲ್ಲಿ ಯಾರು ಕೇಳುವವರಿರಲಿಲ್ಲ. ನಾನು ಮಾತ್ರ 'ನಂದು', 'ನಂದು' ಎಂದು ಚೀರುತ್ತಲೇ ಇದ್ದೆ. ಅಷ್ಟರಲ್ಲಿ ಎಲ್ಲಿಂದಲೋ ಬಂದ ಇಬ್ಬರು ಧಡೂತಿ ದೇಹದವರು ನನ್ನನ್ನ ದರದರನೆ ಎಳೆದು ರಸ್ತೆ ಬದಿಯಲ್ಲಿ ತಂದು ಹಾಕಿದರು.
ನಾನು ಕಷ್ಟ ಪಟ್ಟು ತುಂಬಿದ್ದ ಚೀಲವನ್ನು ಸಹ ಅವರು ತಮ್ಮ ಕಸದ ಗಾಡಿಯಲ್ಲಿ ತುಂಬಿ ಕೊಂಡು ಹೋಗಿದ್ದರು. ನೋಡು ನೋಡುತ್ತಲೇ ಕಸದ ಗಾಡಿ ಮರೆಯಾಗಿ ಹೋಯಿತು. ನಾನು ಏಕಾಂಗಿಯಾಗಿ ಬಿದ್ದಿದ್ದೆ. ನನ್ನದು ಅಂತ ಅಲ್ಲಿ ಏನು ಉಳಿದಿರಲಿಲ್ಲ. ಆದರೆ ಮನಸ್ಸು ಮಾತ್ರ ನೀರಾಳವಾಗಿತ್ತು. ನನಗೆ ಈ ಸಂಸಾರದಿಂದ ಮುಕ್ತಿ ಸಿಕ್ಕಿತ್ತು.
ಕೇಳಲು ಇದೊಂದು ಕನಸಿನಂತಿದ್ದರು ಇದು ಕನಸಲ್ಲ ಇದು ಸತ್ಯ. ನಾವು ನಮ್ಮ ಬಾಳ ದಾರಿಯಲ್ಲಿ ಜನ ಸಂದಣಿಯಲ್ಲಿ ಕಳೆದು ಹೋಗಿರುತ್ತೇವೆ. ಕೇವಲ ಲೌಕಿಕ ಸುಖಕ್ಕಾಗಿ ನಮ್ಮವರನ್ನ ಬಿಟ್ಟು ಅವರ ಕೈಗೂ ಎಟುಕದಷ್ಟು ದೂರ, ಬಹು ದೂರ ಬಂದು ಬಿಟ್ಟಿರುತ್ತೇವೆ. ನಮಗೆ ಗೊತ್ತು ಪರಿಚಯವಿಲ್ಲದ ಊರಲ್ಲಿ ಕಳೆದು ಹೋಗಿರುತ್ತೇವೆ. ನಮ್ಮವರ ಸಾವು ನೋವಿಗೂ ಸ್ಪಂದಿಸದಷ್ಟು ಬ್ಯುಸಿ ನಾವು. ನಮ್ಮ ಪಕ್ಕದಲ್ಲೆ ನಡೆಯುವ ಹಿಂಸೆ, ಅನ್ಯಾಯ, ಅತ್ಯಾಚಾರಗಳನ್ನ ಸಹಿಸಿಕೊಂಡು ಬಿಡುತ್ತೇವೆ. ಹೇರಿಕೊಂಡು ಹೋಗೋದಿಲ್ಲ ಸತ್ತಾಗ ಬಂಡಿ ಅಂತ ಗೊತ್ತಿದ್ದರು ಹಣದ ಹಿಂದೆ ಬೆನ್ನಟ್ಟಿ ಹೋಗುತ್ತೇವೆ. ಹೊಟ್ಟೆಗಾಗಿ, ಬಟ್ಟೆಗಾಗಿ ನಮ್ಮ ಈ ಪಯಣ ನಿತ್ಯ ನಿರಂತರ. ಯಾರಿಗೇನೆಯಾದ್ರು ನಮ್ಮ ತುತ್ತಿನ ಚೀಲವನ್ನ ತುಂಬುತ್ತಲೇ ಇರುತ್ತೇವೆ.
ಬಾಳಿನ ದಾರಿಯಲ್ಲಿ ಪ್ರೀತಿಯ, ಸ್ನೇಹದ ಸಾಲು ಮರಗಳನ್ನ ಬೆಳಿಸೋಣ. ಕಷ್ಟ ಬಂದಾಗ ಒಂದಿಷ್ಟು ಹೊತ್ತು ಮರದ ನೆರಳಲ್ಲಿ ವಿಶ್ರಾಂತಿ ಪಡೆಯೋಣ. ಮರ ಬೆಳೆದು ಕಾಯಿ ಬಿಟ್ಟು ಅವು ಹಣ್ಣಾದಾಗ ಹಂಚಿ ತಿನ್ನೋಣ.
2 comments:
Estondu interesting edu....tumba tumba chennagi barididiya....edannu odabekadaga mailla jumma anta ettu...............hat's off for your writing skill.....
Nice one dude
The last two paragraphs are so meaningful.
Post a Comment