Sunday, September 14, 2008

ಪೂರ್ವಿ

(ಮುಂದುವರೆದಿದೆ)

"ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ..." ಕಿಶೋರನ ನೆನಪಲ್ಲಿ ನೆನಪಾಗಿ ಹೋಗಿದ್ದ ಪೂರ್ವಿಗೆ ಅವಳ ಮೊಬೈಲ್ ರಿಂಗ್ ಅದಾಗಲೇ ಮತ್ತೆ ವಾಸ್ತವ ಕಂಡಿದ್ದು, ಅವಳ ಕನಸಿನ ರಾಜಕುಮಾರ ಕಂಡು ಕಾಣದಂತೆ ಮಾಯವಾಗಿ ಹೋಗಿದ್ದು, ಅವನು ಕೊಟ್ಟ ಗುಲಾಬಿ ಹೂವು ಇದ್ದು ಇಲ್ಲದಂತಾಗಿದ್ದು. ಮೊಬೈಲಿನ ಸದ್ದಿಗೆ ಎಚ್ಚೆತ್ತು ಕಣ್ಣು ಬಿಡದೆ ದಿಂಬಿನ ಕೆಳಗಿದ್ದ ಮೊಬೈಲಿನ ತೆಗೆದು ಅದರ ಪುಟಾಣಿ ಸ್ಕ್ರೀನ್ ಮೇಲೆ ಕಣ್ಣಾಡಿಸಿದ್ದೆ ಪೂರ್ವಿಗೆ ಆಕಾಶ ಭೂಮಿ ಒಂದಾದ ಅನುಭವ, ಹರಿವ ನದಿಗೆ ಸಮುದ್ರ ಕಂಡಂತಾಗಿ ಸಾವರಿಸಿ ಕೊಂಡು ಎದ್ದು ಕುಂತಳು. ಬಾಡದಿರು ಸ್ನೇಹದ ಹೂವೆ ಪ್ರೇಮದ ಬಂದನದಲ್ಲಿ... ಮೊಬೈಲ್ ಇನ್ನೂ ರಿಂಗ್ ಆಗುತ್ತಲೇ ಇತ್ತು. ಕಿಶೂ calling... ಕಿಶೋರನ ಹೆಸರಲ್ಲೇ ಏನೋ ಮಾಯೆ ಇತ್ತು. ಕಾಲ್ recieve ಮಾಡಿ ಹಲೋ ಅಂದಿದ್ದೆ ಆ ಕಡೆಯಿಂದ ಕಿಶೋರ್ ''ಏನು ಪೂರ್ವಿ ಇನ್ನೂ ಮಲಿಗಿದ್ದಿಯಾ atleast ಇವತ್ತಾದ್ರೂ... ಪೂರ್ವಿ ಆಗಲೇ ನಾಲ್ಕು ಗಂಟೆ ಬೇಗ ರೆಡಿ ಆಗಿ ಬಾ... please please ಪೂರ್ವಿ..." ಪೂರ್ವಿಗೆ ಮಾತನಾಡುವದಕ್ಕು ಬಿಡದೆ ಕಿಶೋರ್ ಕಾಲ್ ಕಟ್ ಮಾಡಿದ್ದ.

ಹಾಸಿಗೆ ಮೇಲಿಂದ ಎದ್ದು ಗಡಿಯಾರ ನೋಡಿದಾಗ ಅದರಲ್ಲಿ ಇನ್ನೂ 3:30 ಆಗಿರೋದನ್ನ ಕಂಡು ಇವನಿಗೆ ಯಾವಾಗಲು ಆತುರ ಎಂದು ಕೊಂಡು ಫ್ರೆಶ್ ಆಗಲು ಮಂಚಕ್ಕೆ ಹಾಕಿದ್ದ ಟವೆಲ್ ಒಂದನ್ನು ತೆಗೆದುಕೊಂಡು bathroom ಬಾಗಿಲು ಹಾಕಿಕೊಂಡಳು. ಬಾತ್ ರೂಮ್ ಅಲ್ಲಿ hand basin'ನ ನಲ್ಲಿಯಲ್ಲಿ ನೀರು ಬಿಟ್ಟುಕೊಂಡು ಇನ್ನೇನೂ ಮುಖ ತೊಳೆಯಬೇಕು ಅನ್ನೋವಷ್ಟರಲ್ಲಿ ಅವಳ ಕಣ್ಣು ಬೇಸಿನ್ ಮೇಲಿದ್ದ ಕನ್ನಡಿಯಲ್ಲಿ ಬಿತ್ತು, ಆ ಕನ್ನಡಿಯಿಂದ ಕಿಶೋರ್ ಅವಳನ್ನು ಕದ್ದು ನೋಡಿದಂತಾಗಿ ನಕ್ಕು ನಾಚಿಕೊಂಡು ಟವಲ್'ನಲ್ಲಿ ಮುಖ ಮುಚ್ಚಿಕೊಂಡು bathroom'ನಿಂದ ಓಡಿ ಬಂದಳು. ಆಮೇಲೆ ಅದು ಕೇವಲ ಭ್ರಮೆ ಅನ್ನಿಸಿದರೂ ಆ ಕ್ಷಣ ಎಷ್ಟೊಂದು ಮಧುರವೆನ್ನಿಸಿತ್ತು, ಮತ್ತೆ ಹೋಗಿ ಫ್ರೆಶ್ ಆಗಿ ಬಂದು ಇಂತಹ ಸ್ಪೆಷಲ್ occasion'ಗೆ ಹಾಕಿಕೊಂಡು ಹೋಗಲು ಒಂದು ಒಳ್ಳೆ ಬಟ್ಟೆ ಇಲ್ಲ ಅಂತ ಹಳಹಳಿಸಿದಳು, ಹಸಿರು hmm ನೋ, ಹಳದಿ hmm ನೋ, ಕೆಂಪು hamm ಇದು ಓಕೆ ಆದ್ರೆ ಯಾವುದೊ ಸಿನೆಮಾದಲ್ಲಿ ಕೆಂಪು ಬಟ್ಟೆ ತೊಟ್ಟ ಹೀರೋಯಿನ್'ನ ಗೂಳಿ ಬೆನ್ನಟ್ಟಿಕೊಂಡು ಹೋದ ದೃಶ್ಯ ನೆನಪಾಗಿ ಓಹ್ ಗಾಡ್ its too dangerous ಅಂದು ಕೊಂಡು ಕೊನೆಗೆ ಕಳೆದವಾರ ಕಲ್ಯಾಣಿ ಜೊತೆಗೆ westside'ಗೆ ಹೋದಾಗ ಕಿಶೋರ್ ಸೆಲೆಕ್ಟ್ ಮಾಡಿದ ಆಕಾಶ ನೀಲಿಯ ಚೂಡಿನೆ ಸರಿ ಎನ್ನಿಸಿ ಸುಕ್ಕು ಸುಕ್ಕಾಗಿದ್ದ ಡ್ರೆಸ್'ನ ಕ್ಷಣಾರ್ದದಲ್ಲಿ ಇಸ್ತ್ರಿ ತಿಕ್ಕಿದಳು.

ತಿಳಿ ಆಕಾಶ ನೀಲಿ ಬಣ್ಣದ ಆ ಡ್ರೆಸ್ ಮೇಲೆ ಅಷ್ಟೇ ತಿಳಿಯಾದ ಗುಲಾಬಿ ವರ್ಣದ ಹೂಗಳಿದ್ದವು ಅದರ ಅಂದವನ್ನು ಇನ್ನೂ ಹೆಚ್ಚಿಸುವಂತಹ ಅಷ್ಟೇ ತಿಳಿಯದ ಗುಲಾಬಿ ವರ್ಣದ ದುಪ್ಪಟ್ಟ ಮತ್ತು ಬಾಟಮ್, ದುಪ್ಪಟ್ಟದ ಮೇಲೆ ಟಾಪ್'ನ ವಿರುದ್ಧವಾಗಿ ಆಕಾಶ ನೀಲಿಯ ಬಣ್ಣದ ಹೂಗಳಿದ್ದವು. ಆ ಚೂಡಿ ತೊಟ್ಟು ಪೂರ್ವಿಯ ಕೆನ್ನೆಗಳು ಗುಲಾಬಿ ರಂಗೆರಿದ್ದವು, ಹಣೆಯ ಮೇಲೆ ತಿಳಿ ಗುಲಾಬಿಯ ಚಿಕ್ಕ ಬಿಂದುವೊಂದು ರಾರಾಜಿಸುತ್ತಿತ್ತು, ತಿಳಿ ಗುಲಾಬಿಯ ಬಳೆಗಳು ಸುಸ್ವರ ಹಾಡಿದ್ದವು, ಬೆಳ್ಳಿಯ ಕಲ್ಗೆಜ್ಜೆಗಳು ರಿಂಗನಿಸಿದ್ದವು, ಅಲ್ಮರದಲ್ಲಿದ್ದ ಡ್ರೆಸ್'ಗೆ ಮ್ಯಾಚ್ ಆಗುವಂತಹ ತಿಳಿ ನೀಲಿ ಬಣ್ಣದ vanity bag ಬಗಲೆರಿತ್ತು.

ರೆಡಿ ಆಗಿ ಮತ್ತೆ ಗಡಿಯಾರ ನೋಡಿದಾಗ ಗಂಟೆ 4:30 ಕಿಶೋರನ ಸ್ಥಿತಿ ನೆನಪಾಗಿ ಕಾಲ್ಕಿತ್ತಳು, ಬಾಗಿಲು ತೆಗೆದು ಹೊರಗಡೆ ಬರಲು ಆಕಾಶ ಮೋಡ ಕಟ್ಟಿ ನಿಂತಿತ್ತು ಜೊತೆಗಿರಲಿ ಅಂತ ಮತ್ತೆ ಒಳಗೆ ಹೋಗಿ ಛತ್ರಿ ಹಿಡಿದು ಕೊಂಡು ಬಂದಳು, ರೂಮ'ನ ಬೀಗ ಹಾಕಿ ಚಿಲಕಕ್ಕೆ ಪೋಸ್ಟ್ ಇಟ್ ಅಲ್ಲಿ "ಕಲ್ಯಾಣಿ ಗಣೇಶ ದೇವಸ್ಥಾನಕ್ಕೆ ಹೋಗ್ತಿದ್ದೀನಿ..." ಅಂತ ಬರೆದಿಟ್ಟು ಲಗು ಬಗೆಯಿಂದ ಮೆಟ್ಟಲಿಳಿದು ಹತ್ತಿರದ BMTC busstop ತಲುಪುವಸ್ಟರಲ್ಲಿ ಸಾಕು ಸಾಕಾಗಿತ್ತು ಆದರು ಏನೋ ಸಂತೋಷ್ ಅದೇನೋ ಉತ್ಸಾಹ. ಬಸ್ಸ್ಟಾಪ್ ಅಲ್ಲಿ ಬಸ್ ಬಂದಿದ್ದೆ ಬಸ್ ಹತ್ತಿದಳು ಪೂರ್ವ ಜನ್ಮದ ಪುಣ್ಯವೋ ಏನೋ ಬಸಲ್ಲಿ ಸೀಟ್ ಸಿಕ್ಕಿತ್ತು, ಟಿಕೆಟ್ ಟಿಕೆಟ್ ಅಂತ ಬಂದ ಕಂಡಕ್ಟರ್'ನ ಕೈಗೆ ಹತ್ತು ರೂಪಾಯಿ ಕೊಟ್ಟು ಗಣೇಶ ದೇವಸ್ಥಾನ ಪಾರ್ಕ್ ಅಂದಿದ್ದೆ ಕಂಡಕ್ಟರ್ ಟಿಕೆಟ್ ಹರೆಯುತ್ತ ಅದರ ಹಿಂದೆ ಐದು ರೂಪಾಯಿ ಅಂತ ಗಿಚಿ ಅವಳ ಕೈಗಿಟ್ಟ, ಪೂರ್ವಿಗೆ ಬಸ್ ಇಳಿಯ ಬೇಕಾದರೆ ಇದನ್ನು ಬೇರೆ ನೆನಪು ಇಟ್ಕೊಬೇಕಲ್ಲ ಅಂತ ಕೋಪ ಬಂದಂತಾಗಿ ಟಿಕೆಟನ್ನು ಬ್ಯಾಗಲ್ಲಿ ಇಟ್ಟು ಕೊಂಡಳು. ಕಿವಿಗೆ headphone ಸಿಕ್ಕಿಸಿ ಕೊಂಡು ರೇಡಿಯೋ ಮಿರ್ಚಿ ಕೇಳುತ್ತಾ ನೆನಪಿನಂಗಳಕ್ಕೆ ಜಾರಿದಳು, ರೇಡಿಯೋ "ನನಗೂ ದೇವರಂತ ಗೆಳೆಯಬೇಕು..." ಅಂತ ಹಾಡುತ್ತಲಿತ್ತು.ಪೂರ್ವಿ ಮತ್ತೆ ರಾಜಕುಮಾರನ ಮಡಿಲಲ್ಲಿ ಮಲಗಿದ್ದಳು, ಹುಲ್ಲಿನ ತೆಳು ಹಾಸಿಗೆಯ ಮೇಲೆ ತನ್ನನ್ನೇ ತಾನು ಮರೆತಿದ್ದಳು ಅಷ್ಟರಲ್ಲಿ ಕಂಡಕ್ಟರ್ ಗಣೇಶ ದೇವಸ್ಥಾನ ಅಂತ ಕಿರುಚಿದ್ದಾ, ಕಂಡಕ್ಟರ್'ನ ಕರ್ಕಶ ಧ್ವನಿಗೆ ಪೂರ್ವಿ ಬೆಚ್ಚು ಬಿದ್ದಿದ್ದಳು, ಮತ್ತೆ ಕಿಶೋರನ ನೆನಪಾಗಿ ಲಗು ಬಗೆಯಿಂದ ಐದು ರೂಪಾಯಿಯನ್ನು ಮರೆತು ಬಸ್ನಿಂದ ಇಳಿದಿದ್ದಳು.

ಪಾರ್ಕ್ನ entrance gate ಹತ್ತಿರ ನಿಂತು ಕಿಶೋರನಿಗೆ ಫೋನ್ ಮಾಡಿದಳು, ಆ ಕಡೆಯಿಂದ ಕಿಶೋರ್ "ಎಲ್ಲಿದ್ದಿಯಾ ಪೂರ್ವಿ ನಾನು ನೀನಗೊಸ್ಕರ ನಾಲ್ಕು ಗಂಟೆ ಇಂದ ಕಾಯುತ್ತ ಇದ್ದೀನಿ ಗೊತ್ತಾ" ಅಂದಿದ್ದ ಅದಕ್ಕೆ ಪೂರ್ವಿ "ಇಲ್ವೋ ಇಲ್ಲೇ ಪಾರ್ಕ್ gate ಹತ್ತಿರ ಇದ್ದೀನಿ ನೀನು ಎಲ್ಲಿ ಇದ್ದಿಯಾ " ಅಂದಿದ್ದಳು ಅದಕ್ಕೆ ಕಿಶೋರ್ "ಅದೇ ಲೆಫ್ಟ್ ಅಲ್ಲಿ ಎರಡನೇ ಬೆಂಚ್" ಅಂದಿದ್ದ, ಅದಕ್ಕೆ ಪೂರ್ವಿ ಸರಿ ನೀನು ಅಲ್ಲೆ ಇರು ನಾನು ಇಗಲೇ ಬಂದೆ ಅಂತ ಫೋನ್ ಕಟ್ ಮಾಡಿ ಪಾರ್ಕ್'ನ ಒಳ ನಡೆದಳು.

ಪೂರ್ವಿಯನ್ನು ನೋಡಿ ಕಿಶೋರನ ಮಾತೆ ನಿಂತು ಹೋಗಿದ್ದವು, ಬಾ ಪೂರ್ವಿ ಅಂತ ತನ್ನ handkerchief ಇಂದ ಬೆಂಚನ್ನು ವರೆಸುತ್ತ ಅವಳತ್ತ ನೋಡಿದ. ಪೂರ್ವಿ ಕಣ್ಣಲ್ಲೇ ಮಾತನಾಡಿದ್ದಳು ಅವನ ಕೈ ಹಿಡಿದು ಇಟ್ಸ್ ಓಕೆ ಅಂತ ಅವನ ಪಕ್ಕಕ್ಕೆ ಕುಳಿತಳು, ಅವಳು ಕುಳಿತ ಆ ಕ್ಷಣ ಅವಳು ಹಚ್ಚಿಕೊಂಡಿದ್ದ ಸುಗಂಧ ಧ್ರವ್ಯದ ವಾಸನೆ ಸುತ್ತಲಿನ ಪರಿಸರದಲ್ಲಿ ಹರಡಿ ಸ್ವಚ್ಚನೆಯ ಭಾವ ಹೊಮ್ಮಿತ್ತು.

ಕಿಶೋರನಿಗೆ ಪುರ್ವಿಯ ಕಣ್ಣಲ್ಲಿ ಕಣ್ಣನಿಟ್ಟು ನೋಡುವಷ್ಟು ಧೈರ್ಯ ಉಳಿದಿರಲಿಲ್ಲ, ಕುಂತಲ್ಲೇ ನೆಲವನ್ನೇ ನೋಡ್ತಾ ಇದ್ದ. ಕಿಶೋರನ ತೊಳಲಾಟ ನೋಡದೆ ಪೂರ್ವಿ "ಅಯ್ಯೋ ತುಂಟ ಫೋನ್ ಮಾಡಿ ನನ್ನನ್ನ ಇಲ್ಲಿಗೆ ಕರೆಯಿಸಿ ಕೊಳ್ಳೋದಕ್ಕೆ ಆಗುತ್ತೆ ಇಲ್ಲಿ ನನ್ನ ಜೊತೆ ಮಾತನಾಡುವದಕ್ಕೆ ಎಂತಹ ಸಂಕೋಚ, ನೀನು ಹೇಳಲಿಲ್ಲ ಅಂದರೆ ನಾನೇ ಹೇಳುವೆ ಇಗೋ ನೋಡು " ಅಂತ ತನ್ನಲ್ಲೇ ತಾನೆಂದುಕೊಂಡಳು. ಕೊನೆಗೂ ಕಿಶೋರ್ ಧೈರ್ಯ ಮಾಡಿ ಪೂರ್ವಿ ನಾನು ನೀನಗೆ ಒಂದು ಮುಖ್ಯವಾದ ವಿಷಯ ಹೇಳಬೇಕು, ಅದು ನನ್ನ ಜೀವನದ ಮುಖ್ಯ ವಿಷಯ, ನನ್ನ ಮುಂದಿನ ಜೀವನ ನಿನ್ನ ಒಪ್ಪಿಗೆಯ ಮೇಲೆ ನಿಂತಿದೆ please ಪೂರ್ವಿ ಇಲ್ಲ ಅನ್ನಬೇಡ ಎಂದು ಕಣ್ಣಂಚಿನಲ್ಲಿ ಬಂದ ಕಣ್ಣಿರನ್ನು ವರೆಸಿಕೊಂಡನು. ಪೂರ್ವಿಗೆ ಒಂದು ಕ್ಷಣ ಅವನನ್ನು ತಬ್ಬಿಕೊಂಡು ಹುಚ್ಚಾ ಅದಕ್ಕೇಕೆ ಕಣ್ಣಿರು ನಾನೆಂದು ನಿನ್ನವಳೇ ಎಂದು ಹೇಳೋಣ ಎನ್ನಿಸಿದರೂ ಸಾವರಿಸಿಕೊಂಡು ಅದೇನು ಹೇಳು ಕಿಶೋರ್ ಎಂದಳು, ಅದಕ್ಕೆ ಕಿಶೋರ್ ಅವಳ ಕಣ್ಣುಗಳಿಂದ ತಪ್ಪಿಸಿಕೊಳ್ಳುತ್ತ ಪೂರ್ವಿ ನನಗೆ ಗೊತ್ತಿಲ್ಲದಂಗೆ ನಾನು ಕಲ್ಯಾಣಿನ ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತ ಇದ್ದೀನಿ ಆದರೆ ಅವಳ ಹತ್ತಿರ ಹೇಳುವಷ್ಟು ಧೈರ್ಯ, ಶಕ್ತಿ ನನ್ನಲ್ಲಿ ಇಲ್ಲ, please ಪೂರ್ವಿ ಅವಳಿಗೆ ನೀನೆ ಹೇಗಾದರು ಮಾಡಿ ಹೇಳು, ನನ್ನ ಪ್ರೀತಿನ ಉಳಿಸು ಪೂರ್ವಿ, ಅವಳು ನಿನ್ನ ಮಾತು ಕಂಡಿತವಾಗಿಯು ಕೇಳುತ್ತಾಳೆ, ಇಲ್ಲ ಅನ್ನಬೇಡ ಪೂರ್ವಿ please, ನನ್ನ ಪ್ರೀತಿಯ ಕೂಸನ್ನ ನಿನ್ನ ಮಡಿಲಲ್ಲಿ ಹಾಕಿದ್ದೇನೆ ಅದನ್ನು ಉಳಿಸುವುದು ಬೆಳೆಸುವುದು ಈಗ ನಿನ್ನ ಕೈ ಅಲ್ಲಿದೆ ಪೂರ್ವಿ please please ಅಂತ ಕಿಶೋರ್ ಚಿಕ್ಕ ಮಗುವಿನ ತರಹ ಪೂರ್ವಿಯ ಮಡಿಲಲ್ಲಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ.

ಪೂರ್ವಿಗೆ ಸಿಡಿಲು ಬಡಿದಂತಾಗಿ ಒಂದು ಕ್ಷಣ ಅವಳ ಜೀವನವೇ ನಿಂತ ನೀರಾಗಿತ್ತು. ಚಂದಿರನ ಹತ್ತಿರಕ್ಕೆ ಹೋಗಿ ಅವನನ್ನ ಮುಟ್ಟದೆ ಬಂದಂತ ಅನುಭವ. ಪೂರ್ವಿಗೆ ಕಣ್ಣು ತಪ್ಪಿಸಿ ರವಿಯು ಮೋಡಗಳ ಹಿಂದೆ ಮರೆಯಾಗಿದ್ದ . ಪೂರ್ವಿ ಮತ್ತೊಮ್ಮೆ ಪೂರ್ವಿಯಾಗಿರಲಿಲ್ಲ, ಎಲ್ಲಾ ಇದ್ದು ಏನು ಇಲ್ಲದಂತೆ, ಹಕ್ಕಿಗಳು ತಮಗಿನ್ನೇನು ಕೆಲಸವೆಂಬಂತೆ ಗೂಡು ಸೇರುತ್ತಲಿದ್ದವು...

(ಮುಗಿಯಿತು)