Sunday, November 15, 2009

ಮಾತುಗಳೇಕೆ ಸತ್ತು ಹೋದವು?

ಹತ್ತಿರವಿದ್ದರು ನಾವಿಬ್ಬರು
ಮನಸ್ಸುಗಳು ಹಿಂದಿರುಗಿ ನೋಡದಷ್ಟು ದೂರ ಸಾಗಿವೆ
ನಡುವೆ ಸಾಗರದಷ್ಟು ಮೌನ
ಅಲೆಯ ಅಬ್ಬರಕೆ ಮನದ ಶಾಂತಿ ಕದಡಿದೆ
ನಿನ್ನ ಸನಿಹದಲ್ಲೂ ಏನಿದು
ಹೊಸ ತರಹದ ವಿರಹ

ಮಾತುಗಳೇಕೆ ಸತ್ತು ಹೋದವು?

ನಿನ್ನ ತುಟಿಗಳ ಸಿಹಿ ಸ್ಪರ್ಶಕೆ
ಎದೆಯ ಸೀಳಿ
ಚಿಮ್ಮಿ ಪುಟಿ ಪುಟಿದು
ಹೊರಹೊಮ್ಮುತ್ತಿದ್ದ ಸಪ್ತಸ್ವರ
ಇನ್ನೆಲ್ಲಿ ಮುರಿದು ಹೋದ
ಈ ಕೊಳಲಿನ ಚೂರುಗಳಲ್ಲಿ

ಮಾತುಗಳೇಕೆ ಸತ್ತು ಹೋದವು?

ಸಾಕಿನ್ನು ಕಣ್ಣೀರು
ಸತ್ತವರು ಬದುಕಿ ಬರಲಾರರು
ಕಟ್ಟಬೇಕಿದೆ ದೇಹಕ್ಕೊಂದು ಗೋರಿ
ಎದೆಯಲ್ಲಿ ಸೂತಕ
ಮಡಿಯುಟ್ಟು ದೀಪ ಹಚ್ಚಿ
ಬಿಟ್ಟು ಹೋದ ನೆನಪುಗಳ
ಎತ್ತಿ ಮುದ್ದಾಡಿ ಮಾತು ಕಲಿಸಬೇಕಿದೆ

ಮಾತುಗಳೇಕೆ ಸತ್ತು ಹೋದವು?


- ವಿಜಯ್
15th Nov 2009

Saturday, September 12, 2009

ನನ್ನೊಳಗೆ ನಾನೊಂದು ಪ್ರಶ್ನೆಯಾಗಿರುವೆ

ನನ್ನೊಳಗೆ ನಾನೊಂದು ಪ್ರಶ್ನೆಯಾಗಿರುವೆ
ಉತ್ತರವ ಹುಡುಕುವರಾರು?
ಒಳಗೊಳಗೆ ಸುಟ್ಟು ಬೂದಿಯಾಗಿರುವೆ
ಎದೆಯ ಕಿಚ್ಚು ಆರಿಸುವರಾರು?

ದಿಕ್ಕಿಲ್ಲದ ದಾರಿಯಲ್ಲಿ
ನಡೆ ನಡೆದು ಸೋತಿರುವೆ
ನೀರಿಲ್ಲದ ಊರಿನಲ್ಲಿ
ನಾ ಬಿಕ್ಕುತಿರುವೆ

ಹೇಳದಿರುವ ನೂರೆಂಟು ಮಾತುಗಳಿವೆ
ಕಿವಿಗೊಟ್ಟು ಕೇಳುವರಾರು?
ನನಸಾಗದೆ ಸತ್ತ ಕನಸುಗಳಿಗೆ
ಬೆಂಕಿ ಇಡುವರಾರು?

ಊರ ಜಾತ್ರೆಯಲ್ಲು
ನಾ ಒಂಟಿಯಾಗಿರುವೆ
ನನ್ನದಲ್ಲದ ಊರಿನಲ್ಲಿ
ನನ್ನವರ ಹುಡುಕುತಿರುವೆ

ನೋವುಗಳ ಭಾರ ತಾಳದೆ ಕುಸಿದಿರುವೆ
ಎತ್ತಿ ಹಿಡಿಯುವರಾರು?
ಪ್ರೀತಿಯ ಅರಸಿ ಸೋತು ಶರಣಾಗಿರುವೆ
ಅಪ್ಪಿ ಮುತ್ತಿಕ್ಕುವರಾರು?

ಮುಖವಾಡದ ಬದುಕು
ಭಾವನೆಗಳಿಗೆಲ್ಲಿ ಬೆಲೆ
ದೇವರಿಲ್ಲದ ಗುಡಿಯಲ್ಲಿ
ನಾ ಹರಕೆ ಹೊತ್ತಿರುವೆ

ನನ್ನೊಳಗೆ ನಾನೊಂದು ಪ್ರಶ್ನೆಯಾಗಿರುವೆ
ಉತ್ತರವ ಹುಡುಕುವರಾರು?
ಒಳಗೊಳಗೆ ಸುಟ್ಟು ಬೂದಿಯಾಗಿರುವೆ
ಎದೆಯ ಕಿಚ್ಚು ಆರಿಸುವರಾರು?

Saturday, June 27, 2009

ಇದೇನಾ ಪ್ರೀತಿ?

ಅವಳಿಗಾಗಿ ಕಾಯುತ್ತ ಕುಳಿತೋನಿಗೆ ಕಣ್ಣುಗಳು ಮುಚ್ಚ್ಚಿದ್ದೆ ಗೊತ್ತಾಗಿರಲಿಲ್ಲ. ಇಷ್ಟೊತ್ತಿಗಾಗಲೇ ಬಂದಿರಬೇಕಿತ್ತು ಆದರೆ ಇವತ್ತ್ಯಾಕೋ ಅವಳಿನ್ನು ಬಂದಿರಲಿಲ್ಲ. ಅವಳು ಬಾಗಿಲು ತೆಗೆದು ಒಳಗೆ ಬಂದಾಗಲೇ ನನಗೆ ಎಚ್ಚ್ಚರವಾಗಿದ್ದು. ಬಿಗಿದಪ್ಪಿದ್ದ ಕಣ್ಣು ರೆಪ್ಪೆಗಳನ್ನ ಬಲವಂತವಾಗಿ ಬಿಡಿಸಿ ಅವಳತ್ತ ನೋಡಲು ಪ್ರಯತ್ನಿಸಿದ್ದೆ. ದಿನವು ಅವಳ ಮುಖದಲ್ಲಿರುತ್ತಿದ್ದ ಮಂದಹಾಸ ಇವತ್ತ್ಯಾಕೋ ಮಾಯವಾಗಿತ್ತು. ಅವಳ ಕಣ್ಣುಗಳು ಕೆಂಪಗಾಗಿದ್ದವು, ಅವಳೇನು ಹೇಳದಿದ್ದರೂ ಅವಳ ಕಣ್ಣಂಚಿನಲ್ಲಿದ್ದ ಒಂದು ಪುಟ್ಟ ಕಣ್ಣಿರ ಹನಿಯೇ ಸಾಕಾಗಿತ್ತು ನನ್ನ ಮನಸ್ಸು ಹೀಗೆ ಪರಿತಪಿಸಲು.

ಅವಳನ್ನ ಏನಾಯಿತೆಂದು ಕೇಳೋಣ ಎನ್ನಿಸಿದರು ಬಾಯಿಬಿಟ್ಟು ಕೇಳುವಂತಿರಲಿಲ್ಲ ನಾವಿಬ್ಬರು ಮಾತು ಬಿಟ್ಟು ಅದಾಗಲೇ ಎರಡು ದಿನಗಳಾಗಿತ್ತು. ಮನಸ್ಸು ಕೇಳು ಎಂದರು ಬುದ್ದಿ ಕೇಳಲು ಬಿಡಲಿಲ್ಲ, ಕೇಳಿದರೆ ನಾನೇ ಸೋತಂತಾಗುತ್ತೆಂದು ಬಲವಂತವಾಗಿ ನನ್ನ ಕಣ್ಣುಗಳನ್ನ ಟಿವಿಯತ್ತ ತಿರುಗಿಸಿದೆ. ಆದರು ನನ್ನ ಮಾತನ್ನು ಮೀರಿ ನನ್ನ ಕಣ್ಣುಗಳು ಅವಳನ್ನೇ ನೋಡುತಲಿದ್ದವು.

ಇಷ್ಟಾದರು ಅವಳ ತುಟಿ ಪಿಟಕ್ಕೆನ್ನಲಿಲ್ಲ ಬಾಗಿಲ ಹತ್ತಿರಿದ್ದ ಕುರ್ಚಿಯ ಮೇಲೆ ಕುಳಿತು ಇನ್ನೂ ಕಣ್ಣು ತಿಕ್ಕುತ್ತಲೇ ಇದ್ದಳು. ಇದ್ದಕ್ಕಿದ್ದಂತೆ ಎದ್ದು ಬೆಡ್ ರೂಮಿನೊಳಗೆ ಹೋದಳು. ಇದ್ದೆಲ್ಲದರ ನಡುವೆ ನಾನು ನನಗೆ ಏನು ಗೊತ್ತೆಯಾಗಿಲ್ಲ ಎಂಬಂತೆ ನಟಿಸಲು ಹೋಗಿ ಇನ್ನೂ ನಟಿಸಲು ಸಾದ್ಯವಿಲ್ಲ ಎನಿಸಿ ಇಷ್ಟೊತ್ತಾದರು ಅವಳು ರೂಮಿನಿಂದ ಹೊರಗೆ ಬರದಿದ್ದನ್ನು ನೋಡಿ ಅವಳಿದ್ದಲ್ಲಿಗೆ ನಾನೇ ಹೊರಟೆ.

ಅವಳು ಕನ್ನಡಿಯ ಮುಂದೆ ನಿಂತಿದ್ದಳು ನಾನು ಬಂದಿದ್ದು ಗೊತ್ತಾಗಿಯೋ ಏನೋ ಅಲ್ಲಿಯೇ ಇದ್ದ ವಸ್ತ್ರದಿಂದ ಕಣ್ಣುಗಳನ್ನು ಬಿಗಿಯಾಗಿ ಒತ್ತಿ ಹಿಡಿದಳು. ನನಗೆ ಇನ್ನಷ್ಟು ಹಿಂಸೆಯಾಯಿತು ಕಾಲುಗಳು ನಡುಗಿ ಗಂಟಲು ಒಣಗಿದಂತಾಗಿ ಹೊಟ್ಟೆ ಹಿಂಡಿ ಬಂದಂತಾದರು ಅವಳಿಗೆ ಗೊತ್ತುಪಡಿಸದಂತೆ ಅಲ್ಲಿಯೇ ಇದ್ದ ನ್ಯೂಸ ಪೇಪರನ್ನು ಎತ್ತಿಕೊಂಡು ಬಂದು ಬಿಟ್ಟೆ. ಮತ್ತೆ ಕುರ್ಚಿಯ ಮೇಲೆ ಕುಳಿತು ನ್ಯೂಸ್ ಪೇಪರ್ ಓದಲು ಕುಳಿತವನಂತೆ ನಟಿಸಿದೆ.

ಮನಸ್ಸು ಕೇಳಲಿಲ್ಲ ಏನಾದರು ಮಾಡಲೆಬೇಕೆನ್ನಿಸಿ ಅಡುಗೆ ಮನೆಯೊಳಗೆ ಹೋಗಿ ಚಹಾ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು lighter'ಗಾಗಿ ಹುಡುಕಾಡಿದೆ. ಹಾಳಾದ್ದು lighter ಸಿಗಲೇ ಇಲ್ಲ. ದೇವರ ಮನೆಯೊಳಗೆ ಹೋಗಿ ಕಡ್ಡಿ ಪೊಟ್ಟಣವನ್ನು ತಂದು ಕಡ್ಡಿ ಗೀರಿದೆ. ಫ್ರೀಜ್'ನೊಳಗಿಂದ ಹಾಲನ್ನು ತೆಗೆದು ಎಷ್ಟು ಹಾಕಬೇಕೆಂದು ಗೊತ್ತಾಗದೆ ಇಷ್ಟೂ ಹಾಲನ್ನು ಸುರಿದು ಬಿಟ್ಟೆ. ಪಾತ್ರೆ ಕಾದಿತ್ತೇನೋ ಹಾಲು ಹಾಕುತ್ತಿದ್ದಂತೆ ಚೋರ ಎಂದು ಸದ್ದು ಮಾಡಲು ನನ್ನ ಹೊಟ್ಟೆಯೇ ಚೋರ ಎಂದಂತಾಯಿತು. ಮಾಡುವಿನಲ್ಲಿದ್ದ ಡಬ್ಬಗಳಲ್ಲಿ ಸಕ್ಕರೆಗಾಗಿ ಹುಡುಕಾಡುವಷ್ಟರಲ್ಲಿ ಹಾಲು ಉಕ್ಕಿ ಹರಿದಿತ್ತು. ಕೊನೆಗೂ ಕಷ್ಟ ಪಟ್ಟು ಚಲ್ಲಿದ ಹಾಲಲೆನ್ನಾ ಬಳಿದು ಸಕ್ಕರೆ ಚಹಾಪುಡಿ ಹಾಕಿ ನೋಡಲು ಚಹದಂತಿದ್ದ ಚಹವನ್ನು ಎರಡು ಕಪ್ಪುಗಳಲ್ಲಿ ಸೋಸಿ ಅವಳಿಗೆ ಕೊಡಲು ಓಡಿದೆ.


ಅಷ್ಟರಲ್ಲಾಗಲೇ ಅವಳು ಮುಖವನ್ನು ತೊಳೆದು ದೇವರ ಮುಂದೆ ದೀಪವನ್ನು ಹಚ್ಚುತ್ತಲಿದ್ದಳು. ನಮ್ಮ ನಡುವೆ ಮೌನವೇ ಮಾತಾಗಿತ್ತು. ಅವಳ ಮುಂದೆ ಕಪ್ಪನ್ನು ಹಿಡಿದು ಸುಮ್ಮನೆ ನಿಂತೆ. ಅವಳು ಒಂದು ಮಾತನ್ನು ಆಡದೆ ಕಪ್ಪನ್ನು ತೆಗೆದುಕೊಂಡಳು ನಾನು ನನ್ನ ಕಪ್ಪನ್ನು ತರಲು ಅಡುಗೆ ಮನೆಗೆ ಹೋಗಿ ಬರುವಷ್ಟರಲ್ಲಾಗಲೇ ಅವಳು ಚಹಾ ಕುಡಿದು ಮುಗಿಸಿಬಿಟ್ಟಿದ್ದಳು. ನಾನು ಇನ್ನೇನೂ ಮಾಡಲಾಗದೆ ತಣ್ಣಗಾಗಿದ್ದ ಚಹವನ್ನು ಒಂದೇ ಗುಟುಕಿನಲ್ಲಿ ಕುಡಿದು ಬಿಟ್ಟೆ.

ಪುಸ್ತಕ ಓದುತ್ತ ಕುಳಿತಿದ್ದವಳು ಗಡಿಯಾರವನ್ನೊಮ್ಮೆ ನೋಡಿ ಅಡುಗೆ ಮಾಡಲು ಒಳಗೆ ಹೋದಳು. ನನ್ನ ಮನಸ್ಸಲ್ಲಿನ್ನು ಬರಿ ಪ್ರಶ್ನೆಗಳೇ. ತಳಮಳ ತಡೆಯಲಾಗದೆ ಅಡುಗೆ ಮನೆಯ ಬಾಗಿಲ ಬಳಿ ಹೋಗಿ ನಿಂತೆ. ಅವಳು ಸಾರಿಗೆ ಒಗ್ಗರಣೆ ಹಾಕಿ ಮುಗಿಸಿದಳು. ಒಗ್ಗರಣೆಯ ಘಮ ಘಮ ವಾಸನೆ ಮನೆ ತುಂಬಾ ಹರಡಿತ್ತು. ಬಾಗಿಲ ಬಳಿ ನಿಂತಿದ್ದ ನನ್ನನ್ನು ನೋಡಿಯು ನೋಡದಂತೆ ಹಾಲಿನಲ್ಲಿ ಹೋಗಿ ತಟ್ಟೆ ಬಡಿಸಿಟ್ಟಳು. ನಾನು ಹಿಂದಿನಿಂದ ನೀರನ್ನು ತುಂಬಿಕೊಂಡು ಹೋದೆ. ಕೈಗಳು ಯಾಂತ್ರಿಕವಾಗಿ ತಟ್ಟೆಯಲ್ಲಿದ್ದ ಅನ್ನವನ್ನು ತುತ್ತು ಮಾಡಿ ಬಾಯಿಯಲ್ಲಿ ಇಡುತ್ತಲಿದ್ದವು.

ನನಗೆ ತಡೆಯಲಾಗಲಿಲ್ಲ ಮೌನವನ್ನ ಮುರಿದೆ ಬಿಟ್ಟೆ. ಅವಳಿಂದ ಕಣ್ಣುಗಳನ್ನ ಮರೆ ಮಾಡುತ್ತಾ "ಏನಾಯಿತು" ಅಂತ ಕೇಳಿಯೇ ಬಿಟ್ಟೆ. ಒಂದು ಕ್ಷಣ ಅವಳು ನಾನೇ ಮೊದಲು ಮಾತಾಡಿ ಬಿಟ್ಟೆ ಎಂಬುದನ್ನು ನಂಬಲಾಗದೆ ನನ್ನನ್ನೇ ದಿಟ್ಟಿಸಿ ನೋಡತೊಡಗಿದಳು. ನಾನು ಮತ್ತೆ ಕೇಳಿದೆ "ಯಾಕೆ ಏನಾಯಿತು? ಯಾಕೆ ಅಳ್ತಾಯಿದ್ದೆ?" ಅವಳು ಅದನ್ನ ನೀರಿಕ್ಷಿಸಿಯೇಯಿರಲಿಲ್ಲವೆಂಬಂತೆ "ಎಲ್ಲಿ ಯಾವಾಗ" ಎಂದು ಬಿಟ್ಟಳು. ನಾನು "ಮತ್ತೆ ನಿನ್ನ ಕಣ್ಣುಗಳು ಯಾಕೆ ಕೆಂಪಗಾಗಿದ್ದಾವೆ" ಎನ್ನಲು ಮರೆಯಲಿಲ್ಲ. ಅವಳು ತುಂಟ ನಗೆಯನ್ನು ಚಲ್ಲಿ "ಅದಾ, ಅದು ಇವತ್ತು ಮನೆಗೆ ಬರಬೇಕಾದರೆ ಹಾಳಾದ್ದು ಕಣ್ಣಲ್ಲಿ ಯಾವದೋ ಹುಳು ಹೊಕ್ಕಿತು" ಎನ್ನುತ್ತಾ ಉಂಡ ತಟ್ಟೆಗಳನ್ನ ಎತ್ತಿಕೊಂಡು ಒಳನಡೆದಳು.

Sunday, April 12, 2009

ಇದು ಬದುಕು ಇದು ಸತ್ಯ - 2

ಶ್ರಾವಣಿ ಎಲ್ಲೂ ಹೋಗಿಲ್ಲ. ಅವಳು ನನ್ನಲ್ಲೆ ಇದ್ದಾಳೆ. ನಾನಾಡುವ ಪ್ರತಿಯೊಂದು ಮಾತಿನಲ್ಲೂ, ನಾನೋಡುವ ಪ್ರತಿಯೊಂದು ವಸ್ತುವಿನಲ್ಲೂ, ನಾನು ಉಸಿರಾಡಿಸುವ ಪ್ರತಿ ಉಸಿರಿನಲ್ಲೂ, ನನ್ನ ಪ್ರತಿ ಕಣ ಕಣದಲ್ಲೂ. ಅವಳಾಡಿದ ಪ್ರತಿ ಮಾತು ನನಗಿನ್ನೂ ನೆನಪಿವೆ, ಅವಳಿಟ್ಟ ಪ್ರತಿ ಹೆಜ್ಜೆಯು ನನ್ನ ಹೃದಯದಲ್ಲಿ ಅಚ್ಚ್ಚಾಗಿ ಉಳಿದಿವೆ, ಅವಳೆದೆಯ ಒಂದೊಂದು ಬಡಿತ ಇವತ್ತಿಗೂ ನನಗೆ ಕೇಳಿಸುತ್ತಿದೆ.

ಶ್ರಾವಣಿ ನನ್ನ ಜೀವನದಲ್ಲಿ ಶ್ರಾವಣದಂತೆ ಬಂದಿದ್ದಳು. ಹೊಸತನದ ಗಾಳಿ ಹೊತ್ತು ಪ್ರೀತಿಯ ಹಬ್ಬವನ್ನೇ ತಂದಿದ್ದಳು. ನಮ್ಮಿಬ್ಬರದ್ದು arranged ಮದುವೆಯಾಗಿತ್ತಾದರು ನಾವಿಬ್ಬರೂ ಯಾವ ಪ್ರೇಮಿಗಳಿಗಿಂತಲೂ ಕಡಿಮೆ ಇರಲಿಲ್ಲ. ವಯಸ್ಸಲ್ಲಿ ನನಗಿಂತ ಆರು ವರ್ಷ ಚಿಕ್ಕವಳಾಗಿದ್ದರು ನನಗಿಂತಲೂ ಹೆಚ್ಚು ಹೆಚ್ಚು ವಿಷಯ ತಿಳಿದು ಕೊಂಡಿದ್ದಳು. ರೂಪ, ಗುಣ, ಬುದ್ದಿವಂತಿಕೆ ಹೀಗೆ ಎಲ್ಲದರಲ್ಲೂ ನನಗಿಂತ ಮುಂದಿದ್ದಳು. ಪ್ರತಿಯೊಂದು ವಿಷಯ, ವಸ್ತು, ವ್ಯಕ್ತಿಗಳ ಬಗ್ಗೆ ಅದು ಹೀಗೆನೇ ಅಂತ predict ಮಾಡಿ ಬಿಡುತ್ತಿದ್ದಳು.

ಮದುವೆ ಆಗಿ ಒಂದೇ ತಿಂಗಳಲ್ಲಿ ನಮ್ಮ ಇಡೀ ಮನೆಯ ಚಿತ್ರಣ ಬದಲಾಗಿಬಿಟ್ಟಿತ್ತು. ಅಮ್ಮನಿಗೆ ಕಳೆದ ಎರಡು ವರ್ಷಗಳಿಂದ ಹುಡುಕುತ್ತಿದ್ದ ತನ್ನ ಮುದ್ದಿನ ಸೊಸೆ ಸಿಕ್ಕ ಸಂಭ್ರಮ. ಅಡುಗೆ ಮನೆಯಲ್ಲಿ ಇಷ್ಟು ದಿವಸ ಒಂಟಿಯಾಗಿ ಕೆಲಸ ಮಾಡುತಿದ್ದವಳಿಗೆ ಈಗ ಶ್ರಾವಣಿ ಜೊತೆಯಾಗಿದ್ದಳು. ಅಮ್ಮ ತನ್ನ 35 ವರ್ಷಗಳ experienceನಲ್ಲಿ ಕಲಿತು ಕೊಂಡಿದ್ದ ಪ್ರತಿಯೊಂದು cooking tipsಗಳನ್ನ ತನ್ನ ಮುದ್ದಿನ ಸೊಸೆಗೆ ಕಲಿಸಿ ಕೊಡುವುದರಲ್ಲಿ busy'ಯಾಗಿಬಿಟ್ಟಿದ್ದಳು ಪ್ರತಿಫಲವಾಗಿ ಮನೆಯಲ್ಲಿ ಪ್ರತಿ ದಿನವು ಮ್ರುಸ್ಟಾನ್ನಾ ಭೋಜನ. ಅಪ್ಪನಿಗೂ ಅಷ್ಟೆ ಹೆಣ್ಣು ಮಕ್ಕಳೆಂದರೆ ಅದೇನೋ ವಿಶೇಷ ಪ್ರೀತಿ. ಅವಳಲ್ಲಿ ಮಗಳನ್ನ ಕಂಡಿದ್ದರು. ಪ್ರತಿ ದಿನ ಬೆಳಿಗ್ಗೆ ಅವರು easy chair'ನಲ್ಲಿ ಕುಳಿತು ಬಿಸಿ ಬಿಸಿ ಟೀ ಕುಡಿಯುತ್ತಲಿದ್ದರೆ ಎದುರಿಗೆ ಶ್ರಾವಣಿ ಅವತ್ತಿನ newspaper ಓದುತ್ತ ಕುಳಿತಿರಬೇಕು. ಒಟ್ಟಾರೆ ಇಡೀ ಮನೆ ಬದಲಾಗಿಬಿಟ್ಟಿತ್ತು. ಅಪ್ಪ ಇಲ್ಲಿಯ ತನಕ TV volume ಅನ್ನು ಹೆಚ್ಚಿಗೆ ಇಡಲು ಬಿಡದವರು ಈಗ ಹಾಡೆಂದರೆ ಶ್ರಾವಣಿಗೆ ಇಷ್ಟ ಅಂತ ಅವಳಿಗೆ ಅಡುಗೆ ಮನೆಯಲ್ಲೂ ಹಾಡು ಕೇಳಿಸಲಿ ಅಂತ TV volume ಅನ್ನು ಪಕ್ಕದ ಬೀದಿಯವರೆಗೆ ಕೇಳುವಷ್ಟು increase ಮಾಡಿದ್ದರು. ಅವಳು ತವರಿಗೆ ಹೋದರೆ ಮನೆಯಲ್ಲಿ ಸ್ಮಶಾನ ಮೌನ. ಅವಳು ಹೋದ ಒಂದೇ ಗಂಟೆಗೆ ಅಪ್ಪ ಫೋನ್ ಮಾಡಿ ಮನೆಗೆ ಬಂದು ಬಿಡು ಮಗಳೇ ಎಂದು ಮಕ್ಕಳಂತೆ ಅವಳ ದಾರಿ ಕಾಯುತ್ತ ಕುಳಿತುಕೊಳ್ಳುತ್ತಿದ್ದರು.

ಆದರೆ ನಾನು ಮಾಡಿದ್ದಾದರೂ ಏನು? ನನ್ನ ಸುಖ ಸಂತೋಷಕ್ಕೆ ನಾನೇ ಕಲ್ಲು ಹಾಕಿಬಿಟ್ಟೆ. ಸ್ವರ್ಗದಂತಿದ್ದ ನನ್ನ ಜೀವನವನ್ನ ನಾನೇ ನರಕವನ್ನಾಗಿಸಿಕೊಂಡೆ? ನನ್ನ ಈ ತಪ್ಪಿಗೆ ಕ್ಷಮೆ ಇದೆಯಾ? ನಾನು ಪಾಪಿ. ಹೌದು ನಾನೊಬ್ಬ ಪಾಪಿ. ನನ್ನ ಶ್ರಾವಣಿಯನ್ನ ನಾನೇ ಕೊಂದು ಬಿಟ್ಟಿದ್ದೆ.

(ಇನ್ನೂ ಇದೆ)

Sunday, March 8, 2009

ಇದು ಬದುಕು ಇದು ಸತ್ಯ - 1


ಹೌದು ನಾನು ನನ್ನ ಜೀವನದ ಹದಿನಾಲ್ಕು ಅಮೂಲ್ಯ ವರ್ಷಗಳನ್ನ ಹೀಗೆ ನಾಲ್ಕು ಗೋಡೆಗಳ ಮದ್ಯ ಕಳೆದು ಬಿಟ್ಟೆ. ಇಲ್ಲಿಗೆ ಬಂದು ನಾಳೆಗೆ ಬರೋಬ್ಬರಿ ಹದಿನಾಲ್ಕು ವರ್ಷಗಳು. ಹೊರ ಪ್ರಪಂಚದಿಂದ ದೂರವಾಗಿ ಒಂದು ಜೀವಂತ ಶವದಂತಾಗಿ ಬಿಟ್ಟಿರುವೆ. ಭಾವನೆಗಳೇ ಇಲ್ಲದ ಖಾಕಿಗಳ ನಡುವೆ ನನ್ನ ಭಾವನೆಗಳನ್ನ ಮುಚ್ಚಿಟ್ಟು ಅವರ ಕಣ್ಣುಗಳ ತಪ್ಪಿಸಿ ಅವುಗಳನ್ನ ಕಾದಿಟ್ಟಿರುವೆ. ಬೆಳಗಿನ ಸೂರ್ಯ ಅವನ ಕಿರಣಗಳು ಮತ್ತೆ ಅವನನ್ನ ಬಾಚಿ ತಬ್ಬಿರುವ ಇಬ್ಬನಿ ಇವೆಲ್ಲಾ ಬರಿ ನೆನಪುಗಳು ಮಾತ್ರ. ಎಷ್ಟೋ ಸಾರಿ ನನ್ನ ಭಾವನೆಗಳ ಕಟ್ಟೆ ಒಡೆದು ಹರಿದದ್ದು ಉಂಟು. ಹಳೆಯ ನೆನಪುಗಳು ನಿದ್ದೆ ಬಾರದಂತೆ ಕಾಡಿದ್ದು ಉಂಟು. ಆದರೆ ಅದನ್ನೆಲ್ಲಾ ಇಲ್ಲಿ ಕೇಳೋರು ಯಾರು? ನಾನು ಅದೆನ್ನೆಲ್ಲಾ ಹೇಗೆ ಸಹಿಸಿಕೊಂಡೆ? ಇಲ್ಲಿನ ವಾತಾವರಣವೇ ಹಾಗೆ ಎಲ್ಲಾ ಕಲಿಸಿಬಿಡುತ್ತೆ. ನನ್ನ ದೇಹ ಕಲ್ಲಾಗಿಬಿಟ್ಟಿದೆ. ಆದರೆ ಮನಸ್ಸು? ಇಲ್ಲಾ, ನನ್ನ ಮನಸ್ಸು ಕಲ್ಲಾಗಿಲ್ಲ. ಅದು ಇವತ್ತಿಗೂ ಕಣ್ಣಿರಿಡುತ್ತೆ ಹಸಿದ ಮಗುವಿನಂತೆ.

ಒಮ್ಮೊಮ್ಮೆ ಈ ನಾಲ್ಕು ಗೋಡೆಗಳ ಮದ್ಯ ಅದು ಹೇಗೆ ಒಬ್ಬನೇ ಹುಂಬನಂತೆ ಬದುಕಿ ಬಿಟ್ಟೆ ಅಂತ ಅನ್ನಿಸಿದ್ದು ಉಂಟು. ಆದರೆ ಪ್ರೀತಿನೆ ಹಾಗೆ ಇಡಿ ಪ್ರಪಂಚವನ್ನ ಎದಿರಿಸುವ ಹುಚ್ಚು ದೈರ್ಯವನ್ನ ಕೊಟ್ಟು ಬಿಡುತ್ತೆ. ಅಷ್ಟಕ್ಕೂ ನಾನು ಇವತ್ತಿಗೂ ಬದುಕಿರಲು ಶ್ರಾವಣಿ ಒಬ್ಬಳೇ ಕಾರಣ. ಶ್ರಾವಣಿಯ ನೆನಪುಗಳೇ ಸಾಕಾಗಿದ್ದವು ನಾನು ಉಸಿರಾಡಲು. ಅವಳೇನೋ ಭೂಮಿಯ ಮೇಲಿನ ತನ್ನ ಋಣವನ್ನ ತೀರಿಸಿ ಹೋಗಿಬಿಟ್ಟಳು ಆದರೆ ನಾನಿನ್ನು ಅವಳ ಋಣ ತೀರಿಸಬೇಕಲ್ಲಾ. ನಾನು ಅವಳಿಗೆ ಕೊಟ್ಟ ಎಷ್ಟೊಂದು ಮಾತುಗಳು ಇನ್ನೂ ಮಾತಾಗೆ ಉಳಿದಿದ್ದಾವೆ. ಅವೆಲ್ಲಾ ನೆಡಸಿ ಕೊಡಬೇಡವೇ ?

ಈಗ ಹದಿನಾಲ್ಕು ವರ್ಷಗಳ ನಂತರ ಹುಟ್ಟುವ ಸೂರ್ಯ, ಚಿಲಿಪಿಲಿಗುಟ್ಟುವ ಹಕ್ಕಿಗಳು, ಹರಿಯುವ ನೀರು ಮತ್ತೆ ನನ್ನವೆನಿಸಿವೆ. ಮನಸ್ಸು ಮತ್ತೆ ಮಗುವಿನಂತೆ ಖೂಷಿಪಟ್ಟಿದೆ. ಆ ಮನೆ ಮತ್ತೆ ನನ್ನನ್ನ ಮೊದಲಿನಂತೆ ಸ್ವಿಕರಿಸುತ್ತಾ? ಶ್ರಾವಣಿ ಇಲ್ಲದ ಆ ಮನೆಗೂ ಈ ನಾಲ್ಕು ಗೋಡೆಗಳು ಏನು ವ್ಯತ್ಯಾಸ? ಶ್ರಾವಣಿ ಇಲ್ಲದ ಆ ಮನೆಯಲ್ಲಿ ನಾನು ಬದುಕಿರಬಲ್ಲೇನಾ? ಈ ಮನಸ್ಸು ಹೀಗೇನೆ ಯಾವಾಗಲು ಕೆಟ್ಟದ್ದನ್ನೇ ಯೋಚಿಸುತ್ತೆ.

(ಇನ್ನೂ ಇದೆ)

Sunday, January 18, 2009

ಬಾಳಿನ ದಾರಿಯಲ್ಲಿ

ಅದೇನಾಯ್ತೋ ಗೊತ್ತಿಲ್ಲ ನಾನು ರಸ್ತೆಯ ಮಧ್ಯದಲ್ಲಿ ಬಿದ್ದು ಬಿಟ್ಟಿದ್ದೆ. ನನ್ನ ಕೈಯಲ್ಲಿದ್ದ ಬ್ಯಾಗ್ ಖಾಲಿಯಾಗಿತ್ತು. ರಸ್ತೆಯ ತುಂಬೆಲ್ಲ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದವು. ರಸ್ತೆಯ ತುಂಬೆಲ್ಲ ಹರಡಿದ ವಸ್ತುಗಳಲ್ಲಿ ಹೊಳೆಯುವ ನಕ್ಷತ್ರದಂತಹ ಬಿಲ್ಲೆಗಳಿದ್ದವು, ಅದೆಂತದೋ ಬಂಗಾರದ ಬಣ್ಣದ ಪೆಟ್ಟಿಗೆ, ಬೆಳ್ಳಿಯದೊ ಬಂಗಾರದ್ದೋ ನಾಣ್ಯಗಳಿದ್ದವು (ಸ್ಪಷ್ಟವಾಗಿ ನೆನಪಿಲ್ಲ). ಆಗ ತಾನೇ ಮುದ್ರಣಗೊಂಡಂತಹ ಗರಿಗರಿಯಾದ ನೋಟುಗಳಿದ್ದವು. ಬೆಲೆ ಬಾಳಬಹುದಾದಂತಹ ಒಡವೆಗಳಿದ್ದವು. ಅಸಲಿಗೆ ಅವೆಲ್ಲಾ ನನ್ನವಾ? ಗೊತ್ತಿಲ್ಲಾ.

ನನ್ನ ಸುತ್ತಲಿದ್ದ ಜನ ಅದ್ಯಾವುದೋ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಂಡು ನನ್ನತ್ತ ನೋಡಿ ಗಹಗಹಿಸಿ ನಗುತ್ತಲಿದ್ದರು. ಅದರಲ್ಲೊಬ್ಬ ಸಿಗರೇಟ್ ಸೇದಿ ದಪ್ಪ ಹೋಗೆ ಬಿಡುತ್ತಲಿದ್ದ. ನಾನು ಮಾತ್ರ ರಸ್ತೆಯಲ್ಲಿ ಬಿದ್ದಿದ್ದ ವಸ್ತುಗಳನ್ನು ನನ್ನ ಚೀಲದಲ್ಲಿ ತುಂಬುತಲಿದ್ದೆ. ಸ್ವಲ್ಪ ದೂರದಲ್ಲಿ ಒಂದಷ್ಟು ಜನ ಬಿಕ್ಕಿ ಬಿಕ್ಕಿ ಅಳುತ್ತಲಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟುತಲಿತ್ತು. ಅದರಲ್ಲೊಬ್ಬ ಮಹಿಳೆ ನನ್ನತ್ತ ಕೈ ಮಾಡಿ ಕರೆದಂತಿತ್ತು. ನಾನು ಮಾತ್ರ ಅದ್ಯಾವುದರ ಪರಿವಿಲ್ಲದಂತೆ ರಸ್ತೆಯಲ್ಲಿ ಬಿದ್ದಿದ್ದ ಸಾಮಾನುಗಳನ್ನ ಚೀಲದಲ್ಲಿ ತುಂಬುತ್ತಲೇ ಇದ್ದೆ. ಇನ್ನೊಂದೆಡೆ ಒಂದು ಗುಂಪು ಒಬ್ಬ ಅಮಾಯಕನನ್ನ ಬೆನ್ನಟ್ಟಿ ಹೊರಟಿತ್ತು. ಅವರ ಕೈಯಲ್ಲಿ ಮೀರಿ ಮೀರಿ ಮಿಂಚುತ್ತಿದ್ದ ಮಚ್ಚುಗಳಿದ್ದವು. ನೋಡು ನೋಡುತ್ತಲೇ ಅವನು ಅವರ ಕೈಗೆ ಸಿಕ್ಕಿಬಿಟ್ಟ. ಅವರು ಅವನ ಕೈಯನ್ನ ತುಂಡರಿಸಿ ಬಿಟ್ಟರು. ಅವನ ಬಿಸಿ ರಕ್ತ ನಾನು ಆಯುತಲಿದ್ದ ನೋಟುಗಳ ಮೇಲು ಸಿಡಿದಿತ್ತು ಆದರು ಅದನ್ನ ನನ್ನ ಬಟ್ಟೆಗೆ ಒರಿಸಿಕೊಂಡು ನನ್ನ ಚೀಲದಲ್ಲಿ ಹಾಕಿಕೊಳ್ಳೊದನ್ನ ಮಾತ್ರ ನಾನು ಮರೆತಂತಿರಲಿಲ್ಲ.

ಅಲ್ಲಿ ಒಬ್ಬರು ಸಹ ನನ್ನವರು ಇದ್ದಂತಿರಲಿಲ್ಲ. ಎಲ್ಲರೂ ನನ್ನನ್ನ ಜಾತ್ರೆಯ ತೇರಿನಂತೆ ನೋಡುತಲಿದ್ದರು. ಅಲ್ಲಿ ಯಾರಿಗೂ ನನ್ನ ಪರಿಚಯವಿದ್ದಂತೆ ಕಾಣಲಿಲ್ಲ. ಯಾರೊಬ್ಬರು ನನ್ನ ಸಹಾಯಕ್ಕೆ ಬರಲಿಲ್ಲ. ಅಸಲಿಗೆ ಅವರೆಲ್ಲ ನನ್ನನ್ನ alien ತರಹ ನೋಡುತ್ತಲಿದ್ದರು. ಆದರು ಅದ್ಯಾಕೋ ನಾನು ಮೊಂಡು ಬಿದ್ದವನಂತೆ ಇನ್ನೂ ಚೀಲ ತುಂಬುತಲೇ ಇದ್ದೆ.

ರಸ್ತೆಯಲ್ಲಿ ನಾನು ಹುಚ್ಚನಂತೆ ಹುಡುಕುತ್ತಲಿದ್ದರು ಅವರೆಲ್ಲ ನನ್ನ ಪರಿವಿಲ್ಲದಂತೆ ರಸ್ತೆಯಲ್ಲಿ ಓಡಾಡುತ್ತಲಿದ್ದರು. ಅದರಲೊಬ್ಬ ನನ್ನ ಕೈಯನ್ನ ತುಳಿದು ಬಿಟ್ಟಿದ್ದ. ನೋವಿನಿಂದ ಅವನತ್ತ ನೋಡಲು ಅವನು ಸಹ ಎಲ್ಲರಂತೆ ನನ್ನನ್ನು ನೋಡಿ ನಕ್ಕಿದ್ದ. ಆ ನಗು ಮತ್ತಷ್ಟು ನೋವು ಕೊಟ್ಟಿತ್ತು. ನೋಡು ನೋಡುತ್ತಿದ್ದಂತೆ ಕತ್ತಲೆ ಆವರಿಸಿತ್ತು. ರಸ್ತೆಯನ್ನ ಗೂಡಿಸಲು ಒಂದಿಬ್ಬರು ಮಹಿಳೆಯರು ಉದ್ದುದ್ದ ಪೊರಕೆ ಹಿಡಿದು ನಿಂತಿದ್ದರು. ನಾನು ಅವರನ್ನ ಎಷ್ಟೇ ಕೇಳಿಕೊಂಡರು ಅವರಿಗೆ ಕರುಣೆ ಇದ್ದಂತಿರಲಿಲ್ಲ ಅಲ್ಲಿದ್ದ ವಸ್ತುಗಳೆನ್ನೆಲ್ಲ ಗೂಡಿಸಿ ತಮ್ಮ ಕಸದ ಚೀಲ ತುಂಬುತಲಿದ್ದರು. ನನ್ನ ಕೂಗನ್ನ ಅಲ್ಲಿ ಯಾರು ಕೇಳುವವರಿರಲಿಲ್ಲ. ನಾನು ಮಾತ್ರ 'ನಂದು', 'ನಂದು' ಎಂದು ಚೀರುತ್ತಲೇ ಇದ್ದೆ. ಅಷ್ಟರಲ್ಲಿ ಎಲ್ಲಿಂದಲೋ ಬಂದ ಇಬ್ಬರು ಧಡೂತಿ ದೇಹದವರು ನನ್ನನ್ನ ದರದರನೆ ಎಳೆದು ರಸ್ತೆ ಬದಿಯಲ್ಲಿ ತಂದು ಹಾಕಿದರು.

ನಾನು ಕಷ್ಟ ಪಟ್ಟು ತುಂಬಿದ್ದ ಚೀಲವನ್ನು ಸಹ ಅವರು ತಮ್ಮ ಕಸದ ಗಾಡಿಯಲ್ಲಿ ತುಂಬಿ ಕೊಂಡು ಹೋಗಿದ್ದರು. ನೋಡು ನೋಡುತ್ತಲೇ ಕಸದ ಗಾಡಿ ಮರೆಯಾಗಿ ಹೋಯಿತು. ನಾನು ಏಕಾಂಗಿಯಾಗಿ ಬಿದ್ದಿದ್ದೆ. ನನ್ನದು ಅಂತ ಅಲ್ಲಿ ಏನು ಉಳಿದಿರಲಿಲ್ಲ. ಆದರೆ ಮನಸ್ಸು ಮಾತ್ರ ನೀರಾಳವಾಗಿತ್ತು. ನನಗೆ ಈ ಸಂಸಾರದಿಂದ ಮುಕ್ತಿ ಸಿಕ್ಕಿತ್ತು.

ಕೇಳಲು ಇದೊಂದು ಕನಸಿನಂತಿದ್ದರು ಇದು ಕನಸಲ್ಲ ಇದು ಸತ್ಯ. ನಾವು ನಮ್ಮ ಬಾಳ ದಾರಿಯಲ್ಲಿ ಜನ ಸಂದಣಿಯಲ್ಲಿ ಕಳೆದು ಹೋಗಿರುತ್ತೇವೆ. ಕೇವಲ ಲೌಕಿಕ ಸುಖಕ್ಕಾಗಿ ನಮ್ಮವರನ್ನ ಬಿಟ್ಟು ಅವರ ಕೈಗೂ ಎಟುಕದಷ್ಟು ದೂರ, ಬಹು ದೂರ ಬಂದು ಬಿಟ್ಟಿರುತ್ತೇವೆ. ನಮಗೆ ಗೊತ್ತು ಪರಿಚಯವಿಲ್ಲದ ಊರಲ್ಲಿ ಕಳೆದು ಹೋಗಿರುತ್ತೇವೆ. ನಮ್ಮವರ ಸಾವು ನೋವಿಗೂ ಸ್ಪಂದಿಸದಷ್ಟು ಬ್ಯುಸಿ ನಾವು. ನಮ್ಮ ಪಕ್ಕದಲ್ಲೆ ನಡೆಯುವ ಹಿಂಸೆ, ಅನ್ಯಾಯ, ಅತ್ಯಾಚಾರಗಳನ್ನ ಸಹಿಸಿಕೊಂಡು ಬಿಡುತ್ತೇವೆ. ಹೇರಿಕೊಂಡು ಹೋಗೋದಿಲ್ಲ ಸತ್ತಾಗ ಬಂಡಿ ಅಂತ ಗೊತ್ತಿದ್ದರು ಹಣದ ಹಿಂದೆ ಬೆನ್ನಟ್ಟಿ ಹೋಗುತ್ತೇವೆ. ಹೊಟ್ಟೆಗಾಗಿ, ಬಟ್ಟೆಗಾಗಿ ನಮ್ಮ ಈ ಪಯಣ ನಿತ್ಯ ನಿರಂತರ. ಯಾರಿಗೇನೆಯಾದ್ರು ನಮ್ಮ ತುತ್ತಿನ ಚೀಲವನ್ನ ತುಂಬುತ್ತಲೇ ಇರುತ್ತೇವೆ.

ಬಾಳಿನ ದಾರಿಯಲ್ಲಿ ಪ್ರೀತಿಯ, ಸ್ನೇಹದ ಸಾಲು ಮರಗಳನ್ನ ಬೆಳಿಸೋಣ. ಕಷ್ಟ ಬಂದಾಗ ಒಂದಿಷ್ಟು ಹೊತ್ತು ಮರದ ನೆರಳಲ್ಲಿ ವಿಶ್ರಾಂತಿ ಪಡೆಯೋಣ. ಮರ ಬೆಳೆದು ಕಾಯಿ ಬಿಟ್ಟು ಅವು ಹಣ್ಣಾದಾಗ ಹಂಚಿ ತಿನ್ನೋಣ.