Saturday, June 27, 2009

ಇದೇನಾ ಪ್ರೀತಿ?

ಅವಳಿಗಾಗಿ ಕಾಯುತ್ತ ಕುಳಿತೋನಿಗೆ ಕಣ್ಣುಗಳು ಮುಚ್ಚ್ಚಿದ್ದೆ ಗೊತ್ತಾಗಿರಲಿಲ್ಲ. ಇಷ್ಟೊತ್ತಿಗಾಗಲೇ ಬಂದಿರಬೇಕಿತ್ತು ಆದರೆ ಇವತ್ತ್ಯಾಕೋ ಅವಳಿನ್ನು ಬಂದಿರಲಿಲ್ಲ. ಅವಳು ಬಾಗಿಲು ತೆಗೆದು ಒಳಗೆ ಬಂದಾಗಲೇ ನನಗೆ ಎಚ್ಚ್ಚರವಾಗಿದ್ದು. ಬಿಗಿದಪ್ಪಿದ್ದ ಕಣ್ಣು ರೆಪ್ಪೆಗಳನ್ನ ಬಲವಂತವಾಗಿ ಬಿಡಿಸಿ ಅವಳತ್ತ ನೋಡಲು ಪ್ರಯತ್ನಿಸಿದ್ದೆ. ದಿನವು ಅವಳ ಮುಖದಲ್ಲಿರುತ್ತಿದ್ದ ಮಂದಹಾಸ ಇವತ್ತ್ಯಾಕೋ ಮಾಯವಾಗಿತ್ತು. ಅವಳ ಕಣ್ಣುಗಳು ಕೆಂಪಗಾಗಿದ್ದವು, ಅವಳೇನು ಹೇಳದಿದ್ದರೂ ಅವಳ ಕಣ್ಣಂಚಿನಲ್ಲಿದ್ದ ಒಂದು ಪುಟ್ಟ ಕಣ್ಣಿರ ಹನಿಯೇ ಸಾಕಾಗಿತ್ತು ನನ್ನ ಮನಸ್ಸು ಹೀಗೆ ಪರಿತಪಿಸಲು.

ಅವಳನ್ನ ಏನಾಯಿತೆಂದು ಕೇಳೋಣ ಎನ್ನಿಸಿದರು ಬಾಯಿಬಿಟ್ಟು ಕೇಳುವಂತಿರಲಿಲ್ಲ ನಾವಿಬ್ಬರು ಮಾತು ಬಿಟ್ಟು ಅದಾಗಲೇ ಎರಡು ದಿನಗಳಾಗಿತ್ತು. ಮನಸ್ಸು ಕೇಳು ಎಂದರು ಬುದ್ದಿ ಕೇಳಲು ಬಿಡಲಿಲ್ಲ, ಕೇಳಿದರೆ ನಾನೇ ಸೋತಂತಾಗುತ್ತೆಂದು ಬಲವಂತವಾಗಿ ನನ್ನ ಕಣ್ಣುಗಳನ್ನ ಟಿವಿಯತ್ತ ತಿರುಗಿಸಿದೆ. ಆದರು ನನ್ನ ಮಾತನ್ನು ಮೀರಿ ನನ್ನ ಕಣ್ಣುಗಳು ಅವಳನ್ನೇ ನೋಡುತಲಿದ್ದವು.

ಇಷ್ಟಾದರು ಅವಳ ತುಟಿ ಪಿಟಕ್ಕೆನ್ನಲಿಲ್ಲ ಬಾಗಿಲ ಹತ್ತಿರಿದ್ದ ಕುರ್ಚಿಯ ಮೇಲೆ ಕುಳಿತು ಇನ್ನೂ ಕಣ್ಣು ತಿಕ್ಕುತ್ತಲೇ ಇದ್ದಳು. ಇದ್ದಕ್ಕಿದ್ದಂತೆ ಎದ್ದು ಬೆಡ್ ರೂಮಿನೊಳಗೆ ಹೋದಳು. ಇದ್ದೆಲ್ಲದರ ನಡುವೆ ನಾನು ನನಗೆ ಏನು ಗೊತ್ತೆಯಾಗಿಲ್ಲ ಎಂಬಂತೆ ನಟಿಸಲು ಹೋಗಿ ಇನ್ನೂ ನಟಿಸಲು ಸಾದ್ಯವಿಲ್ಲ ಎನಿಸಿ ಇಷ್ಟೊತ್ತಾದರು ಅವಳು ರೂಮಿನಿಂದ ಹೊರಗೆ ಬರದಿದ್ದನ್ನು ನೋಡಿ ಅವಳಿದ್ದಲ್ಲಿಗೆ ನಾನೇ ಹೊರಟೆ.

ಅವಳು ಕನ್ನಡಿಯ ಮುಂದೆ ನಿಂತಿದ್ದಳು ನಾನು ಬಂದಿದ್ದು ಗೊತ್ತಾಗಿಯೋ ಏನೋ ಅಲ್ಲಿಯೇ ಇದ್ದ ವಸ್ತ್ರದಿಂದ ಕಣ್ಣುಗಳನ್ನು ಬಿಗಿಯಾಗಿ ಒತ್ತಿ ಹಿಡಿದಳು. ನನಗೆ ಇನ್ನಷ್ಟು ಹಿಂಸೆಯಾಯಿತು ಕಾಲುಗಳು ನಡುಗಿ ಗಂಟಲು ಒಣಗಿದಂತಾಗಿ ಹೊಟ್ಟೆ ಹಿಂಡಿ ಬಂದಂತಾದರು ಅವಳಿಗೆ ಗೊತ್ತುಪಡಿಸದಂತೆ ಅಲ್ಲಿಯೇ ಇದ್ದ ನ್ಯೂಸ ಪೇಪರನ್ನು ಎತ್ತಿಕೊಂಡು ಬಂದು ಬಿಟ್ಟೆ. ಮತ್ತೆ ಕುರ್ಚಿಯ ಮೇಲೆ ಕುಳಿತು ನ್ಯೂಸ್ ಪೇಪರ್ ಓದಲು ಕುಳಿತವನಂತೆ ನಟಿಸಿದೆ.

ಮನಸ್ಸು ಕೇಳಲಿಲ್ಲ ಏನಾದರು ಮಾಡಲೆಬೇಕೆನ್ನಿಸಿ ಅಡುಗೆ ಮನೆಯೊಳಗೆ ಹೋಗಿ ಚಹಾ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು lighter'ಗಾಗಿ ಹುಡುಕಾಡಿದೆ. ಹಾಳಾದ್ದು lighter ಸಿಗಲೇ ಇಲ್ಲ. ದೇವರ ಮನೆಯೊಳಗೆ ಹೋಗಿ ಕಡ್ಡಿ ಪೊಟ್ಟಣವನ್ನು ತಂದು ಕಡ್ಡಿ ಗೀರಿದೆ. ಫ್ರೀಜ್'ನೊಳಗಿಂದ ಹಾಲನ್ನು ತೆಗೆದು ಎಷ್ಟು ಹಾಕಬೇಕೆಂದು ಗೊತ್ತಾಗದೆ ಇಷ್ಟೂ ಹಾಲನ್ನು ಸುರಿದು ಬಿಟ್ಟೆ. ಪಾತ್ರೆ ಕಾದಿತ್ತೇನೋ ಹಾಲು ಹಾಕುತ್ತಿದ್ದಂತೆ ಚೋರ ಎಂದು ಸದ್ದು ಮಾಡಲು ನನ್ನ ಹೊಟ್ಟೆಯೇ ಚೋರ ಎಂದಂತಾಯಿತು. ಮಾಡುವಿನಲ್ಲಿದ್ದ ಡಬ್ಬಗಳಲ್ಲಿ ಸಕ್ಕರೆಗಾಗಿ ಹುಡುಕಾಡುವಷ್ಟರಲ್ಲಿ ಹಾಲು ಉಕ್ಕಿ ಹರಿದಿತ್ತು. ಕೊನೆಗೂ ಕಷ್ಟ ಪಟ್ಟು ಚಲ್ಲಿದ ಹಾಲಲೆನ್ನಾ ಬಳಿದು ಸಕ್ಕರೆ ಚಹಾಪುಡಿ ಹಾಕಿ ನೋಡಲು ಚಹದಂತಿದ್ದ ಚಹವನ್ನು ಎರಡು ಕಪ್ಪುಗಳಲ್ಲಿ ಸೋಸಿ ಅವಳಿಗೆ ಕೊಡಲು ಓಡಿದೆ.


ಅಷ್ಟರಲ್ಲಾಗಲೇ ಅವಳು ಮುಖವನ್ನು ತೊಳೆದು ದೇವರ ಮುಂದೆ ದೀಪವನ್ನು ಹಚ್ಚುತ್ತಲಿದ್ದಳು. ನಮ್ಮ ನಡುವೆ ಮೌನವೇ ಮಾತಾಗಿತ್ತು. ಅವಳ ಮುಂದೆ ಕಪ್ಪನ್ನು ಹಿಡಿದು ಸುಮ್ಮನೆ ನಿಂತೆ. ಅವಳು ಒಂದು ಮಾತನ್ನು ಆಡದೆ ಕಪ್ಪನ್ನು ತೆಗೆದುಕೊಂಡಳು ನಾನು ನನ್ನ ಕಪ್ಪನ್ನು ತರಲು ಅಡುಗೆ ಮನೆಗೆ ಹೋಗಿ ಬರುವಷ್ಟರಲ್ಲಾಗಲೇ ಅವಳು ಚಹಾ ಕುಡಿದು ಮುಗಿಸಿಬಿಟ್ಟಿದ್ದಳು. ನಾನು ಇನ್ನೇನೂ ಮಾಡಲಾಗದೆ ತಣ್ಣಗಾಗಿದ್ದ ಚಹವನ್ನು ಒಂದೇ ಗುಟುಕಿನಲ್ಲಿ ಕುಡಿದು ಬಿಟ್ಟೆ.

ಪುಸ್ತಕ ಓದುತ್ತ ಕುಳಿತಿದ್ದವಳು ಗಡಿಯಾರವನ್ನೊಮ್ಮೆ ನೋಡಿ ಅಡುಗೆ ಮಾಡಲು ಒಳಗೆ ಹೋದಳು. ನನ್ನ ಮನಸ್ಸಲ್ಲಿನ್ನು ಬರಿ ಪ್ರಶ್ನೆಗಳೇ. ತಳಮಳ ತಡೆಯಲಾಗದೆ ಅಡುಗೆ ಮನೆಯ ಬಾಗಿಲ ಬಳಿ ಹೋಗಿ ನಿಂತೆ. ಅವಳು ಸಾರಿಗೆ ಒಗ್ಗರಣೆ ಹಾಕಿ ಮುಗಿಸಿದಳು. ಒಗ್ಗರಣೆಯ ಘಮ ಘಮ ವಾಸನೆ ಮನೆ ತುಂಬಾ ಹರಡಿತ್ತು. ಬಾಗಿಲ ಬಳಿ ನಿಂತಿದ್ದ ನನ್ನನ್ನು ನೋಡಿಯು ನೋಡದಂತೆ ಹಾಲಿನಲ್ಲಿ ಹೋಗಿ ತಟ್ಟೆ ಬಡಿಸಿಟ್ಟಳು. ನಾನು ಹಿಂದಿನಿಂದ ನೀರನ್ನು ತುಂಬಿಕೊಂಡು ಹೋದೆ. ಕೈಗಳು ಯಾಂತ್ರಿಕವಾಗಿ ತಟ್ಟೆಯಲ್ಲಿದ್ದ ಅನ್ನವನ್ನು ತುತ್ತು ಮಾಡಿ ಬಾಯಿಯಲ್ಲಿ ಇಡುತ್ತಲಿದ್ದವು.

ನನಗೆ ತಡೆಯಲಾಗಲಿಲ್ಲ ಮೌನವನ್ನ ಮುರಿದೆ ಬಿಟ್ಟೆ. ಅವಳಿಂದ ಕಣ್ಣುಗಳನ್ನ ಮರೆ ಮಾಡುತ್ತಾ "ಏನಾಯಿತು" ಅಂತ ಕೇಳಿಯೇ ಬಿಟ್ಟೆ. ಒಂದು ಕ್ಷಣ ಅವಳು ನಾನೇ ಮೊದಲು ಮಾತಾಡಿ ಬಿಟ್ಟೆ ಎಂಬುದನ್ನು ನಂಬಲಾಗದೆ ನನ್ನನ್ನೇ ದಿಟ್ಟಿಸಿ ನೋಡತೊಡಗಿದಳು. ನಾನು ಮತ್ತೆ ಕೇಳಿದೆ "ಯಾಕೆ ಏನಾಯಿತು? ಯಾಕೆ ಅಳ್ತಾಯಿದ್ದೆ?" ಅವಳು ಅದನ್ನ ನೀರಿಕ್ಷಿಸಿಯೇಯಿರಲಿಲ್ಲವೆಂಬಂತೆ "ಎಲ್ಲಿ ಯಾವಾಗ" ಎಂದು ಬಿಟ್ಟಳು. ನಾನು "ಮತ್ತೆ ನಿನ್ನ ಕಣ್ಣುಗಳು ಯಾಕೆ ಕೆಂಪಗಾಗಿದ್ದಾವೆ" ಎನ್ನಲು ಮರೆಯಲಿಲ್ಲ. ಅವಳು ತುಂಟ ನಗೆಯನ್ನು ಚಲ್ಲಿ "ಅದಾ, ಅದು ಇವತ್ತು ಮನೆಗೆ ಬರಬೇಕಾದರೆ ಹಾಳಾದ್ದು ಕಣ್ಣಲ್ಲಿ ಯಾವದೋ ಹುಳು ಹೊಕ್ಕಿತು" ಎನ್ನುತ್ತಾ ಉಂಡ ತಟ್ಟೆಗಳನ್ನ ಎತ್ತಿಕೊಂಡು ಒಳನಡೆದಳು.