Sunday, March 8, 2009

ಇದು ಬದುಕು ಇದು ಸತ್ಯ - 1


ಹೌದು ನಾನು ನನ್ನ ಜೀವನದ ಹದಿನಾಲ್ಕು ಅಮೂಲ್ಯ ವರ್ಷಗಳನ್ನ ಹೀಗೆ ನಾಲ್ಕು ಗೋಡೆಗಳ ಮದ್ಯ ಕಳೆದು ಬಿಟ್ಟೆ. ಇಲ್ಲಿಗೆ ಬಂದು ನಾಳೆಗೆ ಬರೋಬ್ಬರಿ ಹದಿನಾಲ್ಕು ವರ್ಷಗಳು. ಹೊರ ಪ್ರಪಂಚದಿಂದ ದೂರವಾಗಿ ಒಂದು ಜೀವಂತ ಶವದಂತಾಗಿ ಬಿಟ್ಟಿರುವೆ. ಭಾವನೆಗಳೇ ಇಲ್ಲದ ಖಾಕಿಗಳ ನಡುವೆ ನನ್ನ ಭಾವನೆಗಳನ್ನ ಮುಚ್ಚಿಟ್ಟು ಅವರ ಕಣ್ಣುಗಳ ತಪ್ಪಿಸಿ ಅವುಗಳನ್ನ ಕಾದಿಟ್ಟಿರುವೆ. ಬೆಳಗಿನ ಸೂರ್ಯ ಅವನ ಕಿರಣಗಳು ಮತ್ತೆ ಅವನನ್ನ ಬಾಚಿ ತಬ್ಬಿರುವ ಇಬ್ಬನಿ ಇವೆಲ್ಲಾ ಬರಿ ನೆನಪುಗಳು ಮಾತ್ರ. ಎಷ್ಟೋ ಸಾರಿ ನನ್ನ ಭಾವನೆಗಳ ಕಟ್ಟೆ ಒಡೆದು ಹರಿದದ್ದು ಉಂಟು. ಹಳೆಯ ನೆನಪುಗಳು ನಿದ್ದೆ ಬಾರದಂತೆ ಕಾಡಿದ್ದು ಉಂಟು. ಆದರೆ ಅದನ್ನೆಲ್ಲಾ ಇಲ್ಲಿ ಕೇಳೋರು ಯಾರು? ನಾನು ಅದೆನ್ನೆಲ್ಲಾ ಹೇಗೆ ಸಹಿಸಿಕೊಂಡೆ? ಇಲ್ಲಿನ ವಾತಾವರಣವೇ ಹಾಗೆ ಎಲ್ಲಾ ಕಲಿಸಿಬಿಡುತ್ತೆ. ನನ್ನ ದೇಹ ಕಲ್ಲಾಗಿಬಿಟ್ಟಿದೆ. ಆದರೆ ಮನಸ್ಸು? ಇಲ್ಲಾ, ನನ್ನ ಮನಸ್ಸು ಕಲ್ಲಾಗಿಲ್ಲ. ಅದು ಇವತ್ತಿಗೂ ಕಣ್ಣಿರಿಡುತ್ತೆ ಹಸಿದ ಮಗುವಿನಂತೆ.

ಒಮ್ಮೊಮ್ಮೆ ಈ ನಾಲ್ಕು ಗೋಡೆಗಳ ಮದ್ಯ ಅದು ಹೇಗೆ ಒಬ್ಬನೇ ಹುಂಬನಂತೆ ಬದುಕಿ ಬಿಟ್ಟೆ ಅಂತ ಅನ್ನಿಸಿದ್ದು ಉಂಟು. ಆದರೆ ಪ್ರೀತಿನೆ ಹಾಗೆ ಇಡಿ ಪ್ರಪಂಚವನ್ನ ಎದಿರಿಸುವ ಹುಚ್ಚು ದೈರ್ಯವನ್ನ ಕೊಟ್ಟು ಬಿಡುತ್ತೆ. ಅಷ್ಟಕ್ಕೂ ನಾನು ಇವತ್ತಿಗೂ ಬದುಕಿರಲು ಶ್ರಾವಣಿ ಒಬ್ಬಳೇ ಕಾರಣ. ಶ್ರಾವಣಿಯ ನೆನಪುಗಳೇ ಸಾಕಾಗಿದ್ದವು ನಾನು ಉಸಿರಾಡಲು. ಅವಳೇನೋ ಭೂಮಿಯ ಮೇಲಿನ ತನ್ನ ಋಣವನ್ನ ತೀರಿಸಿ ಹೋಗಿಬಿಟ್ಟಳು ಆದರೆ ನಾನಿನ್ನು ಅವಳ ಋಣ ತೀರಿಸಬೇಕಲ್ಲಾ. ನಾನು ಅವಳಿಗೆ ಕೊಟ್ಟ ಎಷ್ಟೊಂದು ಮಾತುಗಳು ಇನ್ನೂ ಮಾತಾಗೆ ಉಳಿದಿದ್ದಾವೆ. ಅವೆಲ್ಲಾ ನೆಡಸಿ ಕೊಡಬೇಡವೇ ?

ಈಗ ಹದಿನಾಲ್ಕು ವರ್ಷಗಳ ನಂತರ ಹುಟ್ಟುವ ಸೂರ್ಯ, ಚಿಲಿಪಿಲಿಗುಟ್ಟುವ ಹಕ್ಕಿಗಳು, ಹರಿಯುವ ನೀರು ಮತ್ತೆ ನನ್ನವೆನಿಸಿವೆ. ಮನಸ್ಸು ಮತ್ತೆ ಮಗುವಿನಂತೆ ಖೂಷಿಪಟ್ಟಿದೆ. ಆ ಮನೆ ಮತ್ತೆ ನನ್ನನ್ನ ಮೊದಲಿನಂತೆ ಸ್ವಿಕರಿಸುತ್ತಾ? ಶ್ರಾವಣಿ ಇಲ್ಲದ ಆ ಮನೆಗೂ ಈ ನಾಲ್ಕು ಗೋಡೆಗಳು ಏನು ವ್ಯತ್ಯಾಸ? ಶ್ರಾವಣಿ ಇಲ್ಲದ ಆ ಮನೆಯಲ್ಲಿ ನಾನು ಬದುಕಿರಬಲ್ಲೇನಾ? ಈ ಮನಸ್ಸು ಹೀಗೇನೆ ಯಾವಾಗಲು ಕೆಟ್ಟದ್ದನ್ನೇ ಯೋಚಿಸುತ್ತೆ.

(ಇನ್ನೂ ಇದೆ)