Saturday, December 4, 2010

Meluha - ನಾ ಕಂಡಂತೆ


ಅಲ್ಲೊಂದು ಇಡೀ ಸಾಮ್ರಾಜ್ಯ ಅವನ ಆಗಮನಕ್ಕಾಗಿ ನೂರಾರು ವರ್ಷದಿಂದ ಹಾತೊರೆಯುತ್ತಿದೆ. ಅದು ಅಂತಿಂತಹ ಸಾಮ್ರಾಜ್ಯವಲ್ಲ, ಸಾಕ್ಷಾತ್ ಶ್ರೀ ರಾಮ ಕಟ್ಟಿದ ಸಾಮ್ರಾಜ್ಯ. ಭಗವಂತ ರಾಮನಾಳಿದ ಪುಣ್ಯ ಭೂಮಿ. ಸೂರ್ಯವಂಶಿಯರ ದಕ್ಷ ಆಡಳಿತ ಹೊಂದಿರುವ ಸಾಮ್ರಾಜ್ಯ. ಮೆಲುಹ ಧರ್ಮಭೂಮಿ, ಕರ್ಮಭೂಮಿ ಅದೊಂದು ತಪೋಭೂಮಿ. ಮೆಲುಹ ಸ್ವರ್ಗವನ್ನೇ ನಾಚಿಸುವಂತಿತ್ತು. ಅಲ್ಲಿನ ಶಿಸ್ತು, ಸಹಬಾಳ್ವೆ ಅವರ ಶ್ರೀಮಂತಿಕೆ ನಮ್ಮ ಕಲ್ಪನೆಗೂ ಮೀರಿದ್ದು. ಆದರೆ ಅಲ್ಲಿ ಎಲ್ಲವೂ ಸರಿಯಾಗಿಲ್ಲ, ಅವರ ಜೀವನದಿ ಸರಸ್ವತಿ ಬತ್ತುತ್ತಿದೆ. ಅಸಹಾಯಕ ಪ್ರಜೆಗಳ ಮೇಲೆ ಬಯೋತ್ಪಾದಕ ದಾಳಿಗಳಾಗುತ್ತಿವೆ. ಅಲ್ಲಿನ ಬಯೋತ್ಪಾದಕ ದಾಳಿಗಳ ಹಿಂದೆ ಚಂದ್ರವಂಶಿಯರ ಕೈವಾಡವಿದ್ದಂತಿದೆ. ಸೂರ್ಯವಂಶಿ ಮತ್ತು ಚಂದ್ರವಂಶಿಯರ ಸಂಬಂಧ ಮೊದಲಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿದೆ. ಅವರಿಗೆ ಯುದ್ದ ಹೊಸದೇನಲ್ಲ ಆದರೆ ಚಂದ್ರವಂಶಿಯರು ಕ್ಷತ್ರಿಯರಂತೆ ಧೈರ್ಯವಾಗಿ ಯುದಕ್ಕೆ ಬರುತ್ತಿಲ್ಲ ಬದಲಾಗಿ ವಾಮಮಾರ್ಗದಲ್ಲಿ ಅತ್ಯಂತ ಕ್ರೂರಿಗಳಾದ ನಾಗಾಗಳ ಸಹಾಯದಿಂದ ಮೆಲುಹದಲ್ಲಿ ಬಯೋತ್ಪಾದಕ ದಾಳಿ ಮಾಡುತ್ತಿದ್ದಾರೆ. ಇಂತಹ ಹೋರಾಟದಲ್ಲಿ ಅಧರ್ಮದ ವಿರುದ್ದ ಧರ್ಮವನ್ನು ಎತ್ತಿ ಹಿಡಿಯಲು ಮತ್ತು ತಮ್ಮನ್ನು ಮುನ್ನಡೆಸಲು ಅವನು ಬಂದೆ ಬರುವನು ಎಂದು ಮೆಲುಹ ನಿವಾಸಿಗಳು ಕಳೆದ ನೂರು ವರ್ಷಗಳಿಂದ ಕಾಯುತ್ತಿದ್ದಾರೆ. ಹಾಗಾದರೆ ಅವರು ಕಾಯುತ್ತಿರುವುದಾದರು ಯಾರಿಗೆ? ನೀಲಕಂಠನಿಗೆ! ಹೌದು ಸಾಕ್ಷಾತ ಮಹಾದೇವನಿಗೆ, ಪರಮಾತ್ಮ ಶಿವನಿಗೆ. ಶಿವ ಬರುವನೇ? ಬಂದರೂ ಅವನೇ ದೇವಾದಿದೇವ ಶಿವನೆಂದು ಮೆಲುಹ ನಿವಾಸಿಗಳು ಹೇಗೆ ಗುರುತಿಸುತ್ತಾರೆ? ಶಿವ ಸೂರ್ಯವಂಶಿಯರ ನಂಬಿಕೆಯಂತೆ ಧರ್ಮವನ್ನು ಎತ್ತಿ ಹಿಡಿಯುತ್ತಾನಾ? "THE IMMORTALS OF MELUHA" ಪುಸ್ತಕದ ಕಥಾ ಹಂದರವಿದು. Shiva Trilogy ಸರಣಿಯಲ್ಲಿ ಬಂದಿರುವ ಮೊದಲ ಪುಸ್ತಕ "THE IMMORTALS OF MELUHA".

ಕಥೆ 1900 BC ಅಲ್ಲಿ ನಡೆಯುವುದಾದರು ಮೆಲುಹ ನಿವಾಸಿಗಳು ಎದುರಿಸುವ ಕಷ್ಟಗಳು ಬಿನ್ನವಾಗಿಲ್ಲ ಅವು ಪ್ರಸ್ತುತ ಸಮಾಜದಲ್ಲಿ ನಾವು ಎದಿರುಸುತ್ತಿರುವ ಸಮಸ್ಯಗಳಂತೆ ಕಾಣುತ್ತವೆ. ಕಥೆಯಲ್ಲಿ ಬರುವ ಎಲ್ಲ ಪಾತ್ರಗಳು ಪೌರಾಣಿಕವಾದರೂ ಅವುಗಳಿಗೆ ಇಲ್ಲಿ ಒಂತರ ಹೊಸ ಜೀವ ನೀಡಲಾಗಿದೆ, simple ಆಗಿ ಹೇಳೋದಾದ್ರೆ ನಾವು ಅದನ್ನ ಉಹಿಸಿರಲಿಕ್ಕು ಸಾದ್ಯವಿಲ್ಲ even in our wildest dreams. ಹೌದು ಶಿವನ ಬಗ್ಗೆ ನಾವೆಷ್ಟೇ ತಿಳಿದಿದ್ದರೂ ಇಲ್ಲಿ ಎಲ್ಲವೂ ಬಿನ್ನ ಬಿನ್ನ. ಇಲ್ಲಿ ಶಿವ ಒಬ್ಬ Tibetan immigrant! ನಮ್ಮ ಕಲ್ಪನೆಗೂ ಮೀರಿದ್ದು ಅಲ್ವಾ? 'ಸೋಮರಸ', 'ಹರ ಹರ ಮಹಾದೇವ' ಜೈಕಾರ ಹುಟ್ಟಿಕೊಂಡ ಬಗೆ ಮತ್ತು 'ಓಂ' ಚಿನ್ಹೆಯ ಒಳಾರ್ಥ ಎಲ್ಲವೂ ಮುದ ನೀಡುತ್ತೆ. ಜೊತೆಗೆ ಶಿವ ಮತ್ತು ಸತಿಯ (ಪಾರ್ವತಿ) ನವಿರಾದ ಪ್ರೇಮ ಕಥೆ. ಅವರಿಬ್ಬರ ಪ್ರೇಮ ಕಥೆಯಲ್ಲೂ ಅಚ್ಚರಿ ಕಾದಿದೆ, ಸತಿಗೆ ಮೊದಲೆ ಮದುವೆಯಾಗಿದೆ ಮತ್ತವಳು ವಿಕರ್ಮ!

"THE IMMORTALS OF MELUHA" ಒಂದು ಸರಿ ಓದಲೇ ಬೇಕಾದ ಕಥೆ ಮತ್ತದು ಓದಿಸಿಕೊಂಡು ಹೋಗುತ್ತೆ ಕೂಡ.

"THE IMMORTALS OF MELUHA" ಪುಸ್ತಕದ trailer ಅನ್ನು ಇಲ್ಲಿ ನೋಡಬಹುದು - Trailer film.


ಹೆಚ್ಚಿನ ಮಾಹಿತಿಗಾಗಿ - Shiva Trilogy

Friday, August 6, 2010

ನಾನೂ ನನ್ನ mobile

ಪುಟ್ಟ ಪುಟ್ಟ display... ಪುಟ್ಟ ಪುಟ್ಟ keypad... ನನ್ನ ಪುಟ್ಟ display... ನನ್ನ ಪುಟ್ಟ keypad... ನಾನೂ ನನ್ನ mobile... ಈಗ ನನ್ನ ಪಾಲಿಗೆ ಉಳಿದಿರೋದು ಬರಿ ನೆನಪುಗಳಷ್ಟೆ. ನನ್ನ ಪುಟ್ಟ ಮೊಬೈಲು ಕಳೆದು ಹೋಗಿ ಇವತ್ತಿಗೆ ಸರಿಯಾಗಿ ಒಂದು ವಾರವಾಯಿತು. ಅದರ ನೆನಪಲ್ಲಿ ಈ ಪುಟ್ಟ ಲೇಖನ. ದಯವಿಟ್ಟು ಇದನ್ನು ಓದುವಾಗ ನೀವು ಕುಳಿತುಕೊಂಡಲ್ಲೆ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿ. ನನ್ನ ಮೊಬೈಲು ಎಲ್ಲೆ ಇದ್ದರು ಸುಖವಾಗಿರಲೆಂದು ತುಂಬು ಹೃದಯದಿಂದ ಹಾರೈಸಿ. ಹಾಗಂತ ನಾನು ಇದೆ ಮೊದಲ ಸರಿ ಮೊಬೈಲ್ ಕಳೆದುಕೊಂಡಿಲ್ಲ. ಕಳೆದ ಐದು ತಿಂಗಳಲ್ಲಿ ಇದು ಎರಡನೆ ಮೊಬೈಲು. ಮೊದಲು ಸರಿ ಕಳೆದ ಮೊಬೈಲು ಬೆಳೆದು ದೊಡ್ಡದಾಗಿತ್ತು ಬರೋಬ್ಬರಿ ನಾಲ್ಕು ವರ್ಷ ತುಂಬಿ ಐದರಲ್ಲಿ ಬಿದ್ದಿತ್ತು. ಸಾಕಷ್ಟು ಸರಿ ಎದ್ದು ಬಿದ್ರು ಗಟ್ಟಿಮುಟ್ಟಾಗಿತ್ತು, ನೋಡೋಕೆ ಒಳ್ಳೆ ಕ್ಯಾಮೆಲ್ ಕಂಪಾಸ ಬಾಕ್ಸ್ ಇದ್ದಂಗಿತ್ತು. ಕಳೆದರು ಪರವಾಗಿಲ್ಲ ಅದಕ್ಕೆ ಈ ಜಗತ್ತನ್ನು ಎದುರಿಸಿವಷ್ಟು ತಾಕತ್ತು ಮತ್ತೆ ಗಂಡೆದೆಯಿತ್ತು. ಆದರೆ ಈ ಸರಿ ಕಳೆದಿರುವುದು ಪುಟ್ಟ ಮೊಬೈಲು ಅಬ್ಬಬ್ಬ ಅಂದ್ರೆ ಅದಕ್ಕೆ ನಾಲ್ಕೈದು ತಿಂಗಳುಗಳಷ್ಟೆ. ಕರ್ರಗೆ ತೆಳ್ಳಗೆ ಮಿರ್ರನೆ ಮಿಂಚುತಿತ್ತು. ಈಗ ಎಲ್ಲಿದೆಯೋ? ಎನೋ? ಹೊತ್ತು ಹೊತ್ತಿಗೆ ಚಾರ್ಜ ಮಾಡ್ತಿದ್ದಾರೋ ಇಲ್ವೊ? ನನಗಂತು ಅದರದ್ದೆ ಚಿಂತೆಯಾಗಿದೆ. ಪಾಪ ಹಸುಗೂಸು.

ನಮ್ಮ ಮನೆಯಲ್ಲಿ ಮೊದಲಿನಿಂದಲು ನನ್ನ ಮೊಬೈಲು ಅಂದ್ರೆ ಒಂತರ ಮಲತಾಯಿ ಧೋರಣೆ. ಮನೆಯಲ್ಲಿ ನೆಟವರ್ಕ ಸಿಗದಿದ್ದರೆ ಪಾಪ ಮೊಬೈಲಾದ್ರು ಏನು ಮಾಡಬೇಕು ಹೇಳ್ರಿ. ಆದ್ರೆ ಅದನ್ನ ಅರ್ಥ ಮಾಡಿಕೊಳ್ಳೋರು ಯಾರು ಇರಲಿಲ್ಲ. ನಂದು ಹೇಳಿ ಕೇಳಿ ವೊಡಾಫೋನ ನೆಟವರ್ಕ್ ಮನೆಯೊಳಗೆ ಒಂದು ಕಡ್ಡಿ ನೆಟವರ್ಕ್ ಕೂಡ ಬರೋಲ್ಲ. ನೆಟವರ್ಕ್ ಇರದ ನನ್ನ ಮೊಬೈಲು ತಾಯಿ ಇಲ್ಲದ ಕಂದಮ್ಮನಂತೆ ಒಂದು ಮೂಲೆಯಲ್ಲಿ ಬಿದ್ದಿರುತಿತ್ತು. ಅದನ್ನ ಎತ್ತಿ ಮುದ್ದಾಡಿ ಮಾತಾಡಿಸೋರು ಯಾರು ಇರಲಿಲ್ಲ. ನಾನೇ ಅದಕ್ಕೆ ಹೊತ್ತು ಹೊತ್ತಿಗೆ ಮುಖ ತೊಳೆದು ಹೊಸ ವಾಲಪೇಪರ ಹಾಕಿ ದಿನಕ್ಕೆ ಎರಡು ಬಾರಿ ಚಾರ್ಜು ಮಾಡ್ತಿದ್ದೆ. ಈಗ ಚಾರ್ಜರ್ ಮನೆಯಲ್ಲೇ ಇದೆ ಆದರೆ ಅದನ್ನ ಚುಚ್ಚಿಸಿಕೊಳ್ಳಲು ಯಾರು ಇಲ್ಲ.

ಅವತ್ತು ಕೂಡ ಪ್ರತಿ ದಿನದಂತೆ ಕೆಲಸ ಮುಗಿಸಿಕೊಂಡು ಬಸ್ ಹತ್ತಿ ಮಡಿವಾಳದ ಹತ್ತಿರ ಬಂದು ಇಳಿದೆ. ಆದರೆ ಯಾಕೋ ಪ್ಯಾಂಟ ಜೇಬು ಖಾಲಿ ಖಾಲಿ ಅನ್ನಿಸ್ತು ನೋಡಿದ್ರೆ ನನ್ನ ಮೊಬೈಲೇ ಇಲ್ಲ. ನನಗೆ ಆ ಕ್ಷಣಕ್ಕೆ ಅದೊಂದು Breaking News! ಆದರೆ ಆ ಸುದ್ದಿನ ಮನೆಯವರ ಹತ್ತಿರ ಹಂಚಿಕೊಳ್ಳೋನ ಅಂದ್ರೆ ನನ್ನ ಹತ್ತಿರ ಮೊಬೈಲೇ ಇಲ್ಲ. ಮೊದಮೊದಲಿಗೆ ನನಗೆ ಇದು ವಿರೋದಪಕ್ಷದವರದೇ ಕೈವಾಡ ಅನ್ನಿಸಿದರು ಆಮೇಲೆ ಅವರೆಲ್ಲ ಬಳ್ಳಾರಿ ಕಡೆ ಪಾದಯಾತ್ರೆ ಮಾಡ್ತಾಯಿರೋದು ನೆನಪಾಗಿ ಅವರ ಕೈವಾಡ ಇರಲಿಕ್ಕಿಲ್ಲ ಅನ್ನೋದು ಖಾತ್ರಿಯಾಯಿತು. ನಂತರ ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇರಬಹುದೆನ್ನಿಸಿತು. ಹಾಗೇನೆ ಎಡಪಂತಿಯರ ಮತ್ತು ಕೇಸರಿ ಉಗ್ರರ ಕೈವಾಡವಿರುವುದನ್ನು ತಳ್ಳಿ ಹಾಕುವಂತಿಲ್ಲವೆನ್ನಿಸಿತು. ಮುಖ್ಯಮಂತ್ರಿಗಳನ್ನ ಒತ್ತಾಯಿಸಿ ಲೋಕಾಯುಕ್ತ ತನಿಖೆ ಮಾಡಿಸಿದ್ರಾಯ್ತು ಅಂತ ಸಮಾದಾನ ಪಟ್ಟುಕೊಂಡೆ ಯಾಕಂದ್ರೆ ನಮ್ಮ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಬಿಲಕುಲ್ ಒಪ್ಪೊಲ್ಲ ಆಮೇಲೆ ಕಾಂಗ್ರೆಸ್ಸಿಗರ ತರ ನಾನೆಲ್ಲಿಗೆ ಪಾದಯಾತ್ರೆ ಮಾಡಲಿ. ಬಡವ ನೀನು ಮಡಿಗಿದಂಗಿರು ಅಂತ ನಮಗೆ ಲೋಕಾಯುಕ್ತರ ತನಿಖೆನೆ ಸಾಕು. ಮೊಬೈಲು ಕಳೆದು ಹೋಗಿರೊದು ಖಾತ್ರಿಯಾದ ಮೇಲೆ ಅಲ್ಲಿ ಇಲ್ಲಿ ಸುತ್ತಿ ಮನೆಗೆ ಹೋಗುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು. ಬಾಗಿಲು ತೆಗೆದದ್ದೆ ನಮ್ಮಕ್ಕ ಎಷ್ಟು ಸರಿ ನಿನಗೆ ಫೋನ್ ಮಾಡೋದು, ಫೋನ ಎತ್ತೋಕೆ ಏನು ದಾಡಿ ಅಂತ ಮಹಾ ಮಂಗಳಾರತಿ, ಸಹಸ್ರ ನಾಮಾರ್ಚನೆಯನ್ನ ವೈಭವೊಯುತವಾಗಿ ನೆರವೆರಿಸಿದಳು. ನಾನು ರಾತ್ರಿ ಹನ್ನೊಂದು ಗಂಟೆಯಾದ್ರು ಮನೆಗೆ ಬರದೆ ಇರೋದು ಮತ್ತೆ ಫೋನ ರೀಸಿವ್ ಮಾಡದೆ ಇರೋ ಸುದ್ದಿ ಅದಾಗಲೆ ಇನ್ನೂರೈವತ್ತು ಕೀಲೊಮೀಟರು ದಾಟಿ ದಾವಣಗೆರೆ ಮುಟ್ಟಿಯಾಗಿತ್ತು. ನನ್ನ ಮೊಬೈಲು ಕಳೆದು ಹೋದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು.

ಆದರೆ ವಿಪರ್ಯಾಸವೆಂದರೆ ಈ ಸಾರಿ ನನ್ನ ಮೊಬೈಲು ಕಳೆದು ಹೋದ ಕಳಂಕ ನನ್ನ ಸಿಮ್ ಮೇಲೆ ಬಂದಿರೋದು. ನನ್ನ ನಂಬರೇ ಸರಿ ಇಲ್ಲವಂತೆ. ನನ್ನ ಸಿಮ್ ಬರೋಬ್ಬರಿ ಎರಡು ಮೊಬೈಲು ನುಂಗಿ ನೀರು ಕುಡಿದಿದೆಯಂತೆ. ಹಾಗೆ ಬಿಟ್ಟರೆ ಇನ್ನೂ ಎಷ್ಟು ಮೊಬೈಲು ಫೋನುಗಳ ಬಲಿ ತೆಗೆದುಕೊಳ್ಳುತ್ತೋ ಅಂತ ನಮ್ಮಮ್ಮ ಶಾಪ ಹಾಕಿದ್ರು. ಹಾಗೆನೆ ನನ್ನ ಮೊಬೈಲ್ ಫೋನಿನ ವಾಸ್ತು ಸರಿಯಾಗಿರಲಿಲ್ಲವಂತೆ. ಸಿಮ್ ಹಾಕುವ ಸ್ಲಾಟ್ ಈಶಾನ್ಯ ದಿಕ್ಕಿನಲ್ಲಿರಬೇಕಂತೆ ಮತ್ತು ಬ್ಯಾಟರಿ ತಲೆ ಉತ್ತರಕ್ಕಿರಬೇಕಂತೆ, ಕೀ ಪ್ಯಾಡು ಉದ್ದಕ್ಕು ಅಗಲಕ್ಕು ಸಮಾನವಾಗಿರಬೇಕಂತೆ. ಆದರೆ ನನಗು ದಿಕ್ಕುಗಳಿಗು ಮೊದಲಿನಿಂದಲು ಆಗಿಬರುವುದಿಲ್ಲ ಇವತ್ತಿಗೂ ನನಗೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಅಂದ್ರೆ ನಮ್ಮ physics ಮೆಡಮ್ ಇಡುತ್ತಿದ್ದ ಸರಪ್ರೈಸ್ ಟೆಸ್ಟಗಳು ನೆನಪಾಗುತ್ತೆ. ನನ್ನ ಪಾಲಿಗೆ ಉತ್ತರ ಅಂದ್ರೆ ಜಮ್ಮು ಕಶ್ಮೀರ ಮತ್ತೆ ದಕ್ಷಿಣ ಅಂದ್ರೆ ಕನ್ಯಾಕುಮಾರಿ. ಪೂರ್ವ ಮತ್ತು ಪಶ್ಚಿಮ ಇನ್ನೂ ನಿಗೂಡ. ಭಾರತ ನಕಾಶೆಯಲ್ಲಿ ಮಾತ್ರ ನಾನು ದಿಕ್ಕುಗಳನ್ನ ಗುರುತಿಸಬಲ್ಲೆ ಅಂತದರಲ್ಲಿ ಫೋನಿಗೆಲ್ಲ ವಾಸ್ತು ಅಂದರೆ ಮುಗಿಯಿತು ನನಗೆ ಅದಕ್ಕು ಒಬ್ಬ ಕನ್ಸಲಟಂಟ್ ಬೇಕಾಗುತ್ತೆ.

ಆದರೆ ಒಂದು ಸಮಾದಾನದ ವಿಷಯವೆಂದರೆ ನನ್ನ ಮೊಬೈಲ್ ಫೋನ್ದು display ಹೋಗಿತ್ತು ಮತ್ತೆ ನಾನದನ್ನು ಇನ್ನೂ ರಿಪೇರಿ ಮಾಡಿಸಿರಲಿಲ್ಲ ಹಾಗೆ ನನ್ನ ಮುದ್ದಿನ ಅಳಿಯ ಅದನ್ನ ಒಮ್ಮೆ ಇಡ್ಲಿಗೆ ಅಂತ ರುಬ್ಬಿಟ್ಟಿದ್ದ ಹಿಟ್ಟಲ್ಲಿ ಅದ್ದಿ ತೆಗೆದಿದ್ದ ಮತ್ತೆ ಯುಗಾದಿಯಲ್ಲಿ ಅದಕ್ಕೆ ಎಣ್ಣೆ ಸ್ನಾನ ಮಾಡಿಸಿದ್ದ. ಸ್ನಾನ ಮಾಡಿಸಿಕೊಂಡು ಎರಡು ದಿವಸ ನನ್ನ ಮೊಬೈಲು ಕೊಮಾದಲ್ಲಿತ್ತು. ಅದೇನೊ ಮೊಬೈಲ್ ಹೋಮ ಮಾಡಿಸಿ ಉರಿಯುತ್ತಿರುವ ಅಗ್ನಿ ಕುಂಡಕ್ಕೆ ನನ್ನ ಸಿಮ್ ಹಾಕಬೇಕಂತೆ. ನೋಡಿ ನನ್ನ ಸಿಮ್ಗೆ ಆ ಸೀತಾ ಮಾತೆಯ ಪರಿಸ್ಥಿತಿ ಬಂದಿದೆ. ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ ಗುರಿಯಾಗುತಿದೆ ನನ್ನ ಸಿಮ್. ನೋಡುವ ನನ್ನ ಸಿಮ್ ಸೀತೆ ಅಷ್ಟೆ ಪುನೀತೆಯಾಗಿದ್ದರೆ ಭೂಮಿ ಖಂಡಿತ ಬಾಯಿಬಿಡುವುದು. ನಾನು ಹೋಮ ಮಾಡಿಸುವೆ ಅಂದಹಾಗೆ ನೀವು ಮೌನಾಚರಣೆ ಮಾಡಲು ಮರೆಯಬೇಡಿ.

Sunday, January 31, 2010

ಹೀಗೆ ಸುಮ್ಮನೆ

ನೀನು ನಕ್ಕರೆ ಹಾಲು ಸಕ್ಕರೆ
ಅದಕ್ಕೆ ಇರಬೇಕು ಚಿನ್ನ
ನಿಮ್ಮ ಮನೆ ಮಂದಿಯೆಲ್ಲ 'diabetic'!

***

ಸರಕಾರವೇ ಹೇಳಿದೆ
ಆರತಿಗೊಂದು ಮಗಳು
ಕೀರ್ತಿಗೊಬ್ಬ ಮಗನಿರಬೇಕಂತೆ
ಅದಕ್ಕೆ ನನಗೆ ಇಬ್ಬರು ಹೆಂಡತಿಯರು
ಮೊದಲನೆಯವಳು ಆರತಿ
ಎರಡನೆಯವಳು ಕೀರ್ತಿ!

***

ಕಟ್ಟೆ ಕಟ್ಟುವೆ ನಾನೊಂದು ತಾಜಮಹಲ್
ಕೂಡಿ ಬಾಳ್ವೆ ಮಾಡಲೊಂದು ಪ್ರೇಮ ಮಂದಿರ
ಪ್ರೀತಿಯ ಹೂಳಲೊಂದು ಗೋರಿಯನ್ನಲ್ಲ!

***

ಇದ್ದಾಗ ಮೂಸು ನೋಡದ ಮಕ್ಕಳು
ಸತ್ತಾಗ ಕಣ್ಣೀರಿಡುತ್ತಾರೆ!

***

ಪ್ರೀಯೆ ನನ್ನ ಬಿಟ್ಟು
ಹೋಗುವ ಮುನ್ನ
'Harpic' ಕೊಟ್ಟು ಹೋಗು
ನನ್ನೆದೆಯ ತುಂಬಾ ನಿನ್ನ
ಹೆಜ್ಜೆಯ ಗುರುತುಗಳಿವೆ

***

ಪ್ರೀತಿ ಪವಿತ್ರ ಆತ್ಮದಂತೆ
ಅದಕ್ಕೆ ಸಾವಿಲ್ಲ
ದೇಹದಿಂದ ದೇಹದೆಡಗೆ
ಅದರ ಪಯಣ
ಇವತ್ತು ಇವಳು
ನಾಳೆ ಇನ್ನ್ಯಾರೊ?

***

ಪ್ರೀತಿಸಿ ಮದುವೆಯಾಗಬೇಕಂತೆ
ಅದಕ್ಕೆ ನಾನವಳನ್ನ ಪ್ರೀತಿಸಿದೆ
ಇವಳನ್ನ ಮದುವೆಯಾದೆ!

***

ಸ್ನೇಹದಿಂದ ಪ್ರೀತಿ ಹುಟ್ಟಬಹುದು
ಆದರೆ ಪ್ರೀತಿಯಿಂದ ಸ್ನೇಹ ಹುಟ್ಟಲಾರದು

***

ಇದು ಕಲಿಗಾಲ ಸ್ವಾಮಿ
ಗುಡಿ ಗುಂಡಾರಗಳ ಬಿಟ್ಟು
ದೇವರು ಹಾದಿ ಬೀದಿಯ
ಕಾಂಪೌಂಡ್ ಗೋಡೆಗಳ ಮೇಲೆ
ಮೂಗು ಮುಚ್ಚಿ ಕೂತಿರುವನು
ಭಕ್ತರೆ ಕರುಣೆಯಿರಲಿ
ಅಭಿಷೇಕ ಮಾಡದಿದ್ದರೂ ಪರವಾಗಿಲ್ಲ
ದಯವಿಟ್ಟು ಮೂತ್ರ ವಿಸರ್ಜನೆ ಮಾಡಬೇಡಿ!

***

ನನ್ನ inbox ತುಂಬ
ಬರಿ ನೀ ಬರೆದ ಪತ್ರಗಳೆ
ಆದರೆ ಅವನೆಲ್ಲ ಓದುವಷ್ಟು
ಸ್ನೇಹ ಮಾತ್ರ ಉಳಿದಿಲ್ಲ ನೋಡು

***

ನಿದ್ದೆಯಲ್ಲಿರುವವರನ್ನ
ಬಡಿದೆಬ್ಬಿಸಬಹುದು
ಆದರೆ ನಿದ್ದೆಯಲ್ಲಿರುವಂತೆ
ನಟಿಸುವವರ ಎಬ್ಬಿಸಲಸಾದ್ಯ!

***

ಸಂಸಾರಿಗಳಿಗೆ ಹೆಂಡ ಅತಿಯಾದಾಗ
ಮೊದಲು ನೆನಪಾಗುವ ವಸ್ತು 'ಹೆಂಡ-ಅತಿ'!

***

ಗೀಣಿಯ ಹಿಡಿದು ತಂದು
ಪ್ರೀತಿಯಿಂದ ಮಾತು ಕಲಿಸಿದೆ
ಆದರೆ ಇಂದು ಅದು ನನ್ನನ್ನೆ
ಹಂಗಿಸುತಿದೆ ನೋಡಿದಿರಾ?

***

Sunday, January 3, 2010

ಕೇಳಲೊಲ್ಲವು ಕಂಗಳು

ಹೇಗೆ ಹೇಳಲಿ ಗೊತ್ತಾಗದಾಗಿದೆ
ಕಾಡಿ ಬೇಡಿ ಕೈ ಮುಗಿದರು
ಕೇಳಲೊಲ್ಲವು ಕಂಗಳು

ಬಂದ ಕಷ್ಟಗಳನ್ನೆಲ್ಲಾ ನುಂಗಿ
ಉಮ್ಮಳಿಸಿ ಬರುವ ದುಃಖವ ಹತ್ತಿಕ್ಕಿ
ಎದೆಯ ಕಟ್ಟೆ ಒಡೆಯದಂತೆ
ಕಲ್ಲ ಗೋಡೆ ಕಟ್ಟಿ
ಮುಖದ ಮೇಲೊಂದು
ಸುಳ್ಳು ನಗೆಯ ಚೆಲ್ಲಿದರು
ಕೇಳಲೊಲ್ಲವು ಕಂಗಳು
ಕಣ್ಣೀರ ಹಾಕುತಿವೆ

ಹೀಗೇಕೆ ಕಾಡುತಿವೆ?
ಯಾರಿಗೇನು ಅನ್ಯಾಯ ಮಾಡಿರುವೆ?
ಎಲ್ಲಿಗೆ ಹೋಗಲಿ? ಯಾರಿಗೆ ಹೇಳಲಿ?
ಎಳ್ಳ ಕಾಳಷ್ಟು ಕರುಣೆಯಿಲ್ಲ
ಜೀವ ಹಿಂಡಿ ಕೊಲ್ಲುತಿವೆ

ಹಳೆಯದನ್ನೆಲ್ಲಾ ಮರೆತು
ಗಂಟು ಮೂಟೆ ಕಟ್ಟಿ
ಹೊಸ ಕನಸ ಕಟ್ಟಲು
ಆ ಊರ ಬಿಟ್ಟು ಈ ಊರಿಗೆ ಬಂದು
ನೆಮ್ಮದಿಯಿಂದ ಕಣ್ಣು ಮುಚ್ಚಿದರು
ಮೊಂಡು ಬಿದ್ದಿವೆ ಕಂಗಳು
ಮತ್ತದೇ ಹಳೆಯ ಕನಸು ಕಾಣುತಿವೆ

ಪ್ರೀತಿ ಕುರುಡಂತೆ ಕಣ್ಣಿಲ್ಲವಂತೆ
ವಿಪರ್ಯಾಸ ನೋಡಿ
ಕಣ್ಣಲ್ಲೇ ಪ್ರೀತಿ ಹುಟ್ಟಿದೆ
ಬದುಕು ಬಲು ಕ್ರೂರ
ಕಂಗಳ ಮುಂದೆಯೆ ಪ್ರೀತಿ
ಸತ್ತು ಬಿದ್ದರು
ನಂಬಲೊಲ್ಲವು ಕಂಗಳು
ಮತ್ತದೇ ಪ್ರೀತಿಯ ಹುಡುಕುತಿವೆ

ಹೇಗೆ ಹೇಳಲಿ ಗೊತ್ತಾಗದಾಗಿದೆ
ಕಾಡಿ ಬೇಡಿ ಕೈ ಮುಗಿದರು
ಕೇಳಲೊಲ್ಲವು ಕಂಗಳು