Friday, August 6, 2010

ನಾನೂ ನನ್ನ mobile

ಪುಟ್ಟ ಪುಟ್ಟ display... ಪುಟ್ಟ ಪುಟ್ಟ keypad... ನನ್ನ ಪುಟ್ಟ display... ನನ್ನ ಪುಟ್ಟ keypad... ನಾನೂ ನನ್ನ mobile... ಈಗ ನನ್ನ ಪಾಲಿಗೆ ಉಳಿದಿರೋದು ಬರಿ ನೆನಪುಗಳಷ್ಟೆ. ನನ್ನ ಪುಟ್ಟ ಮೊಬೈಲು ಕಳೆದು ಹೋಗಿ ಇವತ್ತಿಗೆ ಸರಿಯಾಗಿ ಒಂದು ವಾರವಾಯಿತು. ಅದರ ನೆನಪಲ್ಲಿ ಈ ಪುಟ್ಟ ಲೇಖನ. ದಯವಿಟ್ಟು ಇದನ್ನು ಓದುವಾಗ ನೀವು ಕುಳಿತುಕೊಂಡಲ್ಲೆ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿ. ನನ್ನ ಮೊಬೈಲು ಎಲ್ಲೆ ಇದ್ದರು ಸುಖವಾಗಿರಲೆಂದು ತುಂಬು ಹೃದಯದಿಂದ ಹಾರೈಸಿ. ಹಾಗಂತ ನಾನು ಇದೆ ಮೊದಲ ಸರಿ ಮೊಬೈಲ್ ಕಳೆದುಕೊಂಡಿಲ್ಲ. ಕಳೆದ ಐದು ತಿಂಗಳಲ್ಲಿ ಇದು ಎರಡನೆ ಮೊಬೈಲು. ಮೊದಲು ಸರಿ ಕಳೆದ ಮೊಬೈಲು ಬೆಳೆದು ದೊಡ್ಡದಾಗಿತ್ತು ಬರೋಬ್ಬರಿ ನಾಲ್ಕು ವರ್ಷ ತುಂಬಿ ಐದರಲ್ಲಿ ಬಿದ್ದಿತ್ತು. ಸಾಕಷ್ಟು ಸರಿ ಎದ್ದು ಬಿದ್ರು ಗಟ್ಟಿಮುಟ್ಟಾಗಿತ್ತು, ನೋಡೋಕೆ ಒಳ್ಳೆ ಕ್ಯಾಮೆಲ್ ಕಂಪಾಸ ಬಾಕ್ಸ್ ಇದ್ದಂಗಿತ್ತು. ಕಳೆದರು ಪರವಾಗಿಲ್ಲ ಅದಕ್ಕೆ ಈ ಜಗತ್ತನ್ನು ಎದುರಿಸಿವಷ್ಟು ತಾಕತ್ತು ಮತ್ತೆ ಗಂಡೆದೆಯಿತ್ತು. ಆದರೆ ಈ ಸರಿ ಕಳೆದಿರುವುದು ಪುಟ್ಟ ಮೊಬೈಲು ಅಬ್ಬಬ್ಬ ಅಂದ್ರೆ ಅದಕ್ಕೆ ನಾಲ್ಕೈದು ತಿಂಗಳುಗಳಷ್ಟೆ. ಕರ್ರಗೆ ತೆಳ್ಳಗೆ ಮಿರ್ರನೆ ಮಿಂಚುತಿತ್ತು. ಈಗ ಎಲ್ಲಿದೆಯೋ? ಎನೋ? ಹೊತ್ತು ಹೊತ್ತಿಗೆ ಚಾರ್ಜ ಮಾಡ್ತಿದ್ದಾರೋ ಇಲ್ವೊ? ನನಗಂತು ಅದರದ್ದೆ ಚಿಂತೆಯಾಗಿದೆ. ಪಾಪ ಹಸುಗೂಸು.

ನಮ್ಮ ಮನೆಯಲ್ಲಿ ಮೊದಲಿನಿಂದಲು ನನ್ನ ಮೊಬೈಲು ಅಂದ್ರೆ ಒಂತರ ಮಲತಾಯಿ ಧೋರಣೆ. ಮನೆಯಲ್ಲಿ ನೆಟವರ್ಕ ಸಿಗದಿದ್ದರೆ ಪಾಪ ಮೊಬೈಲಾದ್ರು ಏನು ಮಾಡಬೇಕು ಹೇಳ್ರಿ. ಆದ್ರೆ ಅದನ್ನ ಅರ್ಥ ಮಾಡಿಕೊಳ್ಳೋರು ಯಾರು ಇರಲಿಲ್ಲ. ನಂದು ಹೇಳಿ ಕೇಳಿ ವೊಡಾಫೋನ ನೆಟವರ್ಕ್ ಮನೆಯೊಳಗೆ ಒಂದು ಕಡ್ಡಿ ನೆಟವರ್ಕ್ ಕೂಡ ಬರೋಲ್ಲ. ನೆಟವರ್ಕ್ ಇರದ ನನ್ನ ಮೊಬೈಲು ತಾಯಿ ಇಲ್ಲದ ಕಂದಮ್ಮನಂತೆ ಒಂದು ಮೂಲೆಯಲ್ಲಿ ಬಿದ್ದಿರುತಿತ್ತು. ಅದನ್ನ ಎತ್ತಿ ಮುದ್ದಾಡಿ ಮಾತಾಡಿಸೋರು ಯಾರು ಇರಲಿಲ್ಲ. ನಾನೇ ಅದಕ್ಕೆ ಹೊತ್ತು ಹೊತ್ತಿಗೆ ಮುಖ ತೊಳೆದು ಹೊಸ ವಾಲಪೇಪರ ಹಾಕಿ ದಿನಕ್ಕೆ ಎರಡು ಬಾರಿ ಚಾರ್ಜು ಮಾಡ್ತಿದ್ದೆ. ಈಗ ಚಾರ್ಜರ್ ಮನೆಯಲ್ಲೇ ಇದೆ ಆದರೆ ಅದನ್ನ ಚುಚ್ಚಿಸಿಕೊಳ್ಳಲು ಯಾರು ಇಲ್ಲ.

ಅವತ್ತು ಕೂಡ ಪ್ರತಿ ದಿನದಂತೆ ಕೆಲಸ ಮುಗಿಸಿಕೊಂಡು ಬಸ್ ಹತ್ತಿ ಮಡಿವಾಳದ ಹತ್ತಿರ ಬಂದು ಇಳಿದೆ. ಆದರೆ ಯಾಕೋ ಪ್ಯಾಂಟ ಜೇಬು ಖಾಲಿ ಖಾಲಿ ಅನ್ನಿಸ್ತು ನೋಡಿದ್ರೆ ನನ್ನ ಮೊಬೈಲೇ ಇಲ್ಲ. ನನಗೆ ಆ ಕ್ಷಣಕ್ಕೆ ಅದೊಂದು Breaking News! ಆದರೆ ಆ ಸುದ್ದಿನ ಮನೆಯವರ ಹತ್ತಿರ ಹಂಚಿಕೊಳ್ಳೋನ ಅಂದ್ರೆ ನನ್ನ ಹತ್ತಿರ ಮೊಬೈಲೇ ಇಲ್ಲ. ಮೊದಮೊದಲಿಗೆ ನನಗೆ ಇದು ವಿರೋದಪಕ್ಷದವರದೇ ಕೈವಾಡ ಅನ್ನಿಸಿದರು ಆಮೇಲೆ ಅವರೆಲ್ಲ ಬಳ್ಳಾರಿ ಕಡೆ ಪಾದಯಾತ್ರೆ ಮಾಡ್ತಾಯಿರೋದು ನೆನಪಾಗಿ ಅವರ ಕೈವಾಡ ಇರಲಿಕ್ಕಿಲ್ಲ ಅನ್ನೋದು ಖಾತ್ರಿಯಾಯಿತು. ನಂತರ ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇರಬಹುದೆನ್ನಿಸಿತು. ಹಾಗೇನೆ ಎಡಪಂತಿಯರ ಮತ್ತು ಕೇಸರಿ ಉಗ್ರರ ಕೈವಾಡವಿರುವುದನ್ನು ತಳ್ಳಿ ಹಾಕುವಂತಿಲ್ಲವೆನ್ನಿಸಿತು. ಮುಖ್ಯಮಂತ್ರಿಗಳನ್ನ ಒತ್ತಾಯಿಸಿ ಲೋಕಾಯುಕ್ತ ತನಿಖೆ ಮಾಡಿಸಿದ್ರಾಯ್ತು ಅಂತ ಸಮಾದಾನ ಪಟ್ಟುಕೊಂಡೆ ಯಾಕಂದ್ರೆ ನಮ್ಮ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಬಿಲಕುಲ್ ಒಪ್ಪೊಲ್ಲ ಆಮೇಲೆ ಕಾಂಗ್ರೆಸ್ಸಿಗರ ತರ ನಾನೆಲ್ಲಿಗೆ ಪಾದಯಾತ್ರೆ ಮಾಡಲಿ. ಬಡವ ನೀನು ಮಡಿಗಿದಂಗಿರು ಅಂತ ನಮಗೆ ಲೋಕಾಯುಕ್ತರ ತನಿಖೆನೆ ಸಾಕು. ಮೊಬೈಲು ಕಳೆದು ಹೋಗಿರೊದು ಖಾತ್ರಿಯಾದ ಮೇಲೆ ಅಲ್ಲಿ ಇಲ್ಲಿ ಸುತ್ತಿ ಮನೆಗೆ ಹೋಗುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು. ಬಾಗಿಲು ತೆಗೆದದ್ದೆ ನಮ್ಮಕ್ಕ ಎಷ್ಟು ಸರಿ ನಿನಗೆ ಫೋನ್ ಮಾಡೋದು, ಫೋನ ಎತ್ತೋಕೆ ಏನು ದಾಡಿ ಅಂತ ಮಹಾ ಮಂಗಳಾರತಿ, ಸಹಸ್ರ ನಾಮಾರ್ಚನೆಯನ್ನ ವೈಭವೊಯುತವಾಗಿ ನೆರವೆರಿಸಿದಳು. ನಾನು ರಾತ್ರಿ ಹನ್ನೊಂದು ಗಂಟೆಯಾದ್ರು ಮನೆಗೆ ಬರದೆ ಇರೋದು ಮತ್ತೆ ಫೋನ ರೀಸಿವ್ ಮಾಡದೆ ಇರೋ ಸುದ್ದಿ ಅದಾಗಲೆ ಇನ್ನೂರೈವತ್ತು ಕೀಲೊಮೀಟರು ದಾಟಿ ದಾವಣಗೆರೆ ಮುಟ್ಟಿಯಾಗಿತ್ತು. ನನ್ನ ಮೊಬೈಲು ಕಳೆದು ಹೋದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು.

ಆದರೆ ವಿಪರ್ಯಾಸವೆಂದರೆ ಈ ಸಾರಿ ನನ್ನ ಮೊಬೈಲು ಕಳೆದು ಹೋದ ಕಳಂಕ ನನ್ನ ಸಿಮ್ ಮೇಲೆ ಬಂದಿರೋದು. ನನ್ನ ನಂಬರೇ ಸರಿ ಇಲ್ಲವಂತೆ. ನನ್ನ ಸಿಮ್ ಬರೋಬ್ಬರಿ ಎರಡು ಮೊಬೈಲು ನುಂಗಿ ನೀರು ಕುಡಿದಿದೆಯಂತೆ. ಹಾಗೆ ಬಿಟ್ಟರೆ ಇನ್ನೂ ಎಷ್ಟು ಮೊಬೈಲು ಫೋನುಗಳ ಬಲಿ ತೆಗೆದುಕೊಳ್ಳುತ್ತೋ ಅಂತ ನಮ್ಮಮ್ಮ ಶಾಪ ಹಾಕಿದ್ರು. ಹಾಗೆನೆ ನನ್ನ ಮೊಬೈಲ್ ಫೋನಿನ ವಾಸ್ತು ಸರಿಯಾಗಿರಲಿಲ್ಲವಂತೆ. ಸಿಮ್ ಹಾಕುವ ಸ್ಲಾಟ್ ಈಶಾನ್ಯ ದಿಕ್ಕಿನಲ್ಲಿರಬೇಕಂತೆ ಮತ್ತು ಬ್ಯಾಟರಿ ತಲೆ ಉತ್ತರಕ್ಕಿರಬೇಕಂತೆ, ಕೀ ಪ್ಯಾಡು ಉದ್ದಕ್ಕು ಅಗಲಕ್ಕು ಸಮಾನವಾಗಿರಬೇಕಂತೆ. ಆದರೆ ನನಗು ದಿಕ್ಕುಗಳಿಗು ಮೊದಲಿನಿಂದಲು ಆಗಿಬರುವುದಿಲ್ಲ ಇವತ್ತಿಗೂ ನನಗೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಅಂದ್ರೆ ನಮ್ಮ physics ಮೆಡಮ್ ಇಡುತ್ತಿದ್ದ ಸರಪ್ರೈಸ್ ಟೆಸ್ಟಗಳು ನೆನಪಾಗುತ್ತೆ. ನನ್ನ ಪಾಲಿಗೆ ಉತ್ತರ ಅಂದ್ರೆ ಜಮ್ಮು ಕಶ್ಮೀರ ಮತ್ತೆ ದಕ್ಷಿಣ ಅಂದ್ರೆ ಕನ್ಯಾಕುಮಾರಿ. ಪೂರ್ವ ಮತ್ತು ಪಶ್ಚಿಮ ಇನ್ನೂ ನಿಗೂಡ. ಭಾರತ ನಕಾಶೆಯಲ್ಲಿ ಮಾತ್ರ ನಾನು ದಿಕ್ಕುಗಳನ್ನ ಗುರುತಿಸಬಲ್ಲೆ ಅಂತದರಲ್ಲಿ ಫೋನಿಗೆಲ್ಲ ವಾಸ್ತು ಅಂದರೆ ಮುಗಿಯಿತು ನನಗೆ ಅದಕ್ಕು ಒಬ್ಬ ಕನ್ಸಲಟಂಟ್ ಬೇಕಾಗುತ್ತೆ.

ಆದರೆ ಒಂದು ಸಮಾದಾನದ ವಿಷಯವೆಂದರೆ ನನ್ನ ಮೊಬೈಲ್ ಫೋನ್ದು display ಹೋಗಿತ್ತು ಮತ್ತೆ ನಾನದನ್ನು ಇನ್ನೂ ರಿಪೇರಿ ಮಾಡಿಸಿರಲಿಲ್ಲ ಹಾಗೆ ನನ್ನ ಮುದ್ದಿನ ಅಳಿಯ ಅದನ್ನ ಒಮ್ಮೆ ಇಡ್ಲಿಗೆ ಅಂತ ರುಬ್ಬಿಟ್ಟಿದ್ದ ಹಿಟ್ಟಲ್ಲಿ ಅದ್ದಿ ತೆಗೆದಿದ್ದ ಮತ್ತೆ ಯುಗಾದಿಯಲ್ಲಿ ಅದಕ್ಕೆ ಎಣ್ಣೆ ಸ್ನಾನ ಮಾಡಿಸಿದ್ದ. ಸ್ನಾನ ಮಾಡಿಸಿಕೊಂಡು ಎರಡು ದಿವಸ ನನ್ನ ಮೊಬೈಲು ಕೊಮಾದಲ್ಲಿತ್ತು. ಅದೇನೊ ಮೊಬೈಲ್ ಹೋಮ ಮಾಡಿಸಿ ಉರಿಯುತ್ತಿರುವ ಅಗ್ನಿ ಕುಂಡಕ್ಕೆ ನನ್ನ ಸಿಮ್ ಹಾಕಬೇಕಂತೆ. ನೋಡಿ ನನ್ನ ಸಿಮ್ಗೆ ಆ ಸೀತಾ ಮಾತೆಯ ಪರಿಸ್ಥಿತಿ ಬಂದಿದೆ. ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ ಗುರಿಯಾಗುತಿದೆ ನನ್ನ ಸಿಮ್. ನೋಡುವ ನನ್ನ ಸಿಮ್ ಸೀತೆ ಅಷ್ಟೆ ಪುನೀತೆಯಾಗಿದ್ದರೆ ಭೂಮಿ ಖಂಡಿತ ಬಾಯಿಬಿಡುವುದು. ನಾನು ಹೋಮ ಮಾಡಿಸುವೆ ಅಂದಹಾಗೆ ನೀವು ಮೌನಾಚರಣೆ ಮಾಡಲು ಮರೆಯಬೇಡಿ.